ಕೇಪ್ಟೌನ್ : ಟಿ20 ವಿಶ್ವ ಕಪ್ನ ಮೊದಲ (Women’s T20 World Cup) ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಫರ್ಧಿ ಪಾಕಿಸ್ತಾನ ತಂಡವನ್ನು ಸೋಲಿಸಿರುವ ಭಾರತ ತಂಡ ಶುಭಾರಂಭ ಮಾಡಿದೆ. ಈ ಗೆಲುವಿನ ಮೂಲಕ ಭಾರತ ತಂಡ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ವಿಶ್ವಾಸ ಮೂಡಿಸಿಕೊಂಡಿದೆ. ಪಂದ್ಯದಲ್ಲಿ ಪಾಕಿಸ್ತಾನ ತಂಡದ 150 ರನ್ಗಳ ಗೆಲುವಿನ ಸವಾಲು ಕೊಟ್ಟರೆ ಭಾರತ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೋಡ್ರಿಗಸ್ (53) ಅಜೇಯ ಅರ್ಧ ಶತಕ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಅವರ ಈ ಅಮೋಘ ಇನಿಂಗ್ಸ್ಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯೇ ಪ್ರೇರಣೆಯಂತೆ.
ಜೆಮಿಮಾ ರೋಡ್ರಿಗಸ್ 53 ರನ್ ಬಾರಿಸಲು 38 ಎಸೆತಗಳನ್ನ ಬಳಸಿಕೊಂಡಿದ್ದರು. ಅದರಲ್ಲೂ ಕೊನೆಯಲ್ಲಿ ಅವರು ಸತತ ಎರಡು ಫೋರ್ ಬಾರಿಸುವ ಸಂಭ್ರಮಾಚರಣೆ ಮಾಡಿದ್ದರು. ತಮ್ಮ ಇನಿಂಗ್ಸ್ ಕುರಿತು ಮಾತನಾಡಿರುವ ಅವರು, ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯವೆಂದರೆ ನಮಗೆ ಯಾವಗಲೂ ವಿಶೇಷ ಎನಿಸುತ್ತದೆ. ನಾವು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳ ರೋಚಕತೆಯನ್ನು ನೋಡಿಕೊಂಡು ಬೆಳೆದವರು. ಅದರಲ್ಲೂ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ 82 ರನ್ ನನ್ನ ಪಾಲಿನ ಸ್ಮರಣೀಯ ಇನಿಂಗ್ಸ್ ಎಂದು ಹೇಳಿದ್ದಾರೆ.
ಈ ಇನಿಂಗ್ಸ್ ನನ್ನ ಪಾಲಿಗೆ ಸ್ಮರಣೀಯ. ಯಾಕೆಂದರೆ ನಾನು ಕಳೆದ ಹಲವು ದಿನಗಳಿಂದ ಉತ್ತಮವಾಗಿ ರನ್ ಪೇರಿಸುತ್ತಿರಲಿಲ್ಲ. ಹೀಗಾಗಿ ವಿಶೇಷ ಎನಿಸಿಕೊಂಡಿದೆ. ಉತ್ತಮ ಬ್ಯಾಟರ್ ಆಗಿ ಸ್ಕೋರ್ ಬಾರಿಸುವ ವೇಳೆ ನಾನು ಅದನ್ನು ಖುಷಿಯಿಂದ ಸ್ವೀಕರಿಸಲು ಸಾಧ್ಯವಿಲ್ಲ. ಯಾಕೆಂದರೆ, ನೆಟ್ನಲ್ಲಿ ನಾನು ಸಾಕಷ್ಟು ಅಭ್ಯಾಸಗಳನ್ನು ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ : INDvsPAK T20 : ಪಾಕಿಸ್ತಾನ ತಂಡದ ವಿರುದ್ಧ ಭಾರತದ ವನಿತೆಯರಿಗೆ ಏಳು ವಿಕೆಟ್ ಭರ್ಜರಿ ಜಯ
ಇದೊಂದು ಕಷ್ಟದ ಪರಿಸ್ಥಿತಿಯಾಗಿತ್ತು. ಆದರೂ ನಾನು ಉತ್ತಮವಾಗಿ ಬ್ಯಾಟ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಭಾಗಿಯಾಗಿರುವುದು ಸ್ಮರಣೀಯ ಕ್ಷಣ ಎನಿಸಿಕೊಂಡಿತು ಎಂದು ಜೆಮಿಮಾ ಹೇಳಿದ್ದಾರೆ.