Site icon Vistara News

Virat Kohli | ಏಷ್ಯಾ ಕಪ್‌ನಲ್ಲಿ ಮಿಂಚಿದ ಬಳಿಕ ವಿರಾಟ್‌ ಕೊಹ್ಲಿ ಟಿ-20 ರ‍್ಯಾಂಕಿಂಗ್‌ ಎಷ್ಟು?

virat

ನವದೆಹಲಿ: ಶತಕದ ಬರ, ಫಾರ್ಮ್‌ ಕೊರತೆ, ಕಲಾತ್ಮಕ ಆಟದ ಅಭಾವವನ್ನು ಏಷ್ಯಾ ಕಪ್‌ ಟೂರ್ನಿಯಲ್ಲಿ ನೀಗಿಸಿರುವ ವಿರಾಟ್‌ ಕೊಹ್ಲಿ (Virat Kohli) ಐಸಿಸಿ ಟಿ-೨೦ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ಐಸಿಸಿ ಪ್ರಕಟಿಸಿರುವ ಪರಿಷ್ಕೃತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ೧೪ ಸ್ಥಾನ ಮೇಲೇರುವ ಮೂಲಕ ೧೫ನೇ ಸ್ಥಾನ ಪಡೆದಿದ್ದಾರೆ. ಕಳೆದ ವಾರ ಅವರು ರ‍್ಯಾಂಕಿಂಗ್‌ ಪಟ್ಟಿಯಲ್ಲಿ ೨೯ನೇ ಸ್ಥಾನದಲ್ಲಿದ್ದರು.

ಐಸಿಸಿ ಟಿ-೨೦ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಸೂರ್ಯಕುಮಾರ್‌ ಯಾದವ್‌ ನಾಲ್ಕು, ನಾಯಕ ರೋಹಿತ್‌ ಶರ್ಮಾ ೧೪, ಇಶಾನ್‌ ಕಿಶನ್‌ ೨೨ ಹಾಗೂ ಕೆ.ಎಲ್‌.ರಾಹುಲ್‌ ೨೩ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಅಗ್ರ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಐಡೆನ್‌ ಮಾರ್ಕ್ರಮ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಏಷ್ಯಾ ಕಪ್‌ನಲ್ಲಿ ಬೃಹತ್‌ ಮೊತ್ತ ಪೇರಿಸಲು ವಿಫಲರಾದ ಪಾಕ್‌ನ ಬಾಬರ್‌ ಅಜಂ ತೃತೀಯ ಸ್ಥಾನದಲ್ಲಿದ್ದಾರೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕದ ನೆರವಿನಿಂದ ಐದು ಪಂದ್ಯಗಳಲ್ಲಿ ಒಟ್ಟು ೨೭೬ ರನ್‌ ಗಳಿಸುವ ಮೂಲಕ ಟೂರ್ನಿಯಲ್ಲಿ ಹೆಚ್ಚು ರನ್‌ ಪೇರಿಸಿದ ಎರಡನೇ ಆಟಗಾರ ಎನಿಸಿದ್ದರು. ಮೊಹಮ್ಮದ್‌ ರಿಜ್ವಾನ್‌ ಆರು ಪಂದ್ಯಗಳಿಂದ ೨೮೧ ರನ್‌ ಗಳಿಸಿದ್ದರು.

ಇದನ್ನೂ ಓದಿ | Virat kohli | ಚೊಚ್ಚಲ ಟಿ20(ಐ) ಶತಕವನ್ನು ಪತ್ನಿ, ಪುತ್ರಿಗೆ ಅರ್ಪಿಸಿದ ವಿರಾಟ್‌ ಕೊಹ್ಲಿ

Exit mobile version