ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ದಾಖಲೆಗಳ ಸರದಾರ, ಕಿಂಗ್ ಖ್ಯಾತಿಯ(king kohli) ವಿರಾಟ್ ಕೊಹ್ಲಿ(Virat Kohli) ಅವರ ಕ್ರಿಕೆಟ್ ವೃತ್ತಿ ಬದುಕಿಗೆ(virat kohli cricket journey) ಇಂದಿಗೆ 15 ವರ್ಷಗಳು ತುಂಬಿದೆ. ಇಷ್ಟು ವರ್ಷಗಳ ಅವರ ಕ್ರಿಕೆಟ್ ಬಾಳ್ವೆಯಲ್ಲಿ ಅನೇಕ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಮುರಿದು ಮುನ್ನುಗುತ್ತಿದ್ದಾರೆ. ಇನ್ನೂ ಕೂಡ ಕೆಲ ವರ್ಷಗಳು ಭಾರತ ತಂಡದ ಪರ ಆಡಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.
ಲಂಕಾ ವಿರುದ್ಧ ಪದಾರ್ಪಣೆ
ವಿರಾಟ್ ಕೊಹ್ಲಿ ಅವರು ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್-19 ವಿಶ್ವಕಪ್ ಗೆದ್ದಿದ್ದ ಅವರಿಗೆ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹವಾಗ್ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೇವಲ 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.
ಅಮೋಘ ಸಾಧನೆ
34 ವರ್ಷದ ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 275 ಏಕದಿನ ಪಂದ್ಯಗಳನ್ನು ಆಡಿದ್ದು 57.32 ರ ಸರಾಸರಿಯಲ್ಲಿ 12898 ರನ್ ಗಳಿಸಿದ್ದಾರೆ. ಇದರಲ್ಲಿ 46 ಶತಕ ಮತ್ತು 65 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ.
ಅಂಡರ್ 19 ವಿಶ್ವಕಪ್ ವಿಜೇತ ನಾಯಕ
ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹಿರಿಮೆಯೂ ವಿರಾಟ್ ಪಾಲಿಗಿದೆ. 2008ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂಡರ್-19ನೇ ವಿಶ್ವಕಪ್ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಡಿ-ಎಲ್ ನಿಯಮದಂತೆ 12 ರನ್ನುಗಳಿಂದ ಮಣಿಸಿ ಚಾಂಪಿಯನ್ ಆಗಿ ಮೂಡಿಬಂದಿತ್ತು. ವಿರಾಟ್ ಅವರು ಇಂದು ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ ಅವರ ಪಾಲಿಗೆ ಇದು ಶ್ರೇಷ್ಠ ಟೂರ್ನಿಯಾಗಿದೆಯಂತೆ. ಹಿಂದೊಮ್ಮೆ ಅವರು ಈ ಮಾತನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದರು. “ಅಂಡರ್-19 ವಿಶ್ವಕಪ್ ಪಂದ್ಯಾವಳಿ ತನ್ನ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು. ನನಗೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಮತ್ತು ಕ್ರಿಕೆಟ್ ರಂಗದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು. ಹಾಗಾಗಿಯೇ ಆ ಪಂದ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ’ ಎಂದು ಕೊಹ್ಲಿ ಹೇಳಿದ್ದರು.
ಇದನ್ನೂ ಓದಿ Virat Kohli: ರಜೆಯಲ್ಲಿದ್ದರೂ ಓಟ ಮಾತ್ರ ನಿರಂತರ; ಕೊಹ್ಲಿಯ ಈ ಮಾತಿನ ರಹಸ್ಯವೇನು?
ನಾಯಕನಾಗಿಯೂ ಸಾಧನೆ
2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸರಣಿ ಗೆಲುವು ದಾಖಲಿಸಿತ್ತು. ಭಾರತೀಯ ತಂಡವು 70 ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಸಾಧಿಸಿದ ಮೊದಲ ಸರಣಿ ಗೆಲುವು ಇದಾಗಿತ್ತು. ಈ ಕೀರ್ತಿ ವಿರಾಟ್ ಕೊಹ್ಲಿಗೆ ಸೇರಿದೆ. ಕೊಹ್ಲಿ ನಾಯಕನಾಗಿ 68 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 40 ಗೆದ್ದರೆ, 17 ರಲ್ಲಿ ಸೋಲು ಮತ್ತು 11 ಡ್ರಾ ಕಂಡಿದೆ. 2019ರ ಏಕದಿನ ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಿ ವೇಳೆ ಭಾರತ ತಂಡ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡು ನಿರಾಸೆ ಮೂಡಿಸಿತ್ತು.
15 ವರ್ಷಗಳ ತಮ್ಮ ಕ್ರಿಕೆಟ್ ಪ್ರಯಣವನ್ನು ಕೊಹ್ಲಿ ಒಂದೇ ಚಿತ್ರದಲ್ಲಿ ಫಾರೆವರ್ ಗ್ರೇಟ್ಫುಲ್ ಎಂದು ಬರೆದು ಕೊಂಡಿದ್ದಾರೆ. ಈ ಫೋಟೊ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಸ್ಮರಣೀಯ ಗೆಲುವು ತಂದು ಕೊಟ್ಟ ಬಳಿಕ ಸಂಭ್ರಮಿಸಿದ ಫೋಟೊವಾಗಿದೆ.