ಅಡಿಲೇಡ್: ಟಿ20 ವಿಶ್ವ ಕಪ್ನ ಬುಧವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಫೇಕ್ ಫೀಲ್ಡಿಂಗ್(ಮೋಸದ ಕ್ಷೇತ್ರರಕ್ಷಣೆ) ಮಾಡಿದ ಕಾರಣ ಬಾಂಗ್ಲಾದೇಶಕ್ಕೆ ಸೋಲುವ ಸ್ಥಿತಿ ಎದುರಾಯಿತು ಎಂದು ಬಾಂಗ್ಲಾ ತಂಡದ ಕೀಪರ್ ನೂರಲ್ ಹಸನ್ ಗಂಭೀರ ಆರೋಪ ಮಾಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ನೂರಲ್ ಹಸನ್ ಬಾಂಗ್ಲಾದೇಶದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ಗಳು ಸರಿಯಾಗಿ ಗಮನಿಸಿದ್ದರೆ ನಮಗೆ ನಿರ್ಣಾಯಕ 5 ರನ್ ಪೆನಾಲ್ಟಿ ರೂಪದಲ್ಲಿ ಸಿಗುತ್ತಿದ್ದವು. ಇದರಿಂದ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ನೂರುಲ್ ಹಸನ್ ಆರೋಪಿಸಿದ್ದಾರೆ.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 6 ವಿಕೆಟ್ಗೆ 185 ರನ್ ಗಳಿಸಿತು. ಬಾಂಗ್ಲಾ ಚೇಸಿಂಗ್ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 16 ಓವರ್ಗೆ ಸೀಮಿತಗೊಳಿಸಿ ಬಾಂಗ್ಲಾ ತಂಡಕ್ಕೆ 151 ರನ್ ಟಾರ್ಗೆಟ್ ನೀಡಲಾಯಿತು ಅದರಂತೆ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 16 ಓವರ್ಗಳಲ್ಲಿ 6 ವಿಕೆಟ್ಗೆ 145 ರನ್ ಗಳಿಸಿ 5 ರನ್ ಅಂತರದಿಂದ ಸೋಲುಕಂಡಿತು.
ಏನಿದು ಘಟನೆ
ಬಾಂಗ್ಲಾದೇಶ ತಂಡದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆತದಲ್ಲಿ ಲಿಟನ್ ದಾಸ್ ಕವರ್ಸ್ ಡೀಪ್ ಕಡೆಗೆ ಚೆಂಡನ್ನು ಹೊಡೆದರು. ಈ ವೇಳೆ ಬೌಂಡರಿ ಲೈನ್‌ನಿಂದ ಅರ್ಶ್ದೀಪ್ ಸಿಂಗ್ ಚೆಂಡನ್ನು ವಿಕೆಟ್ ಕೀಪರ್ ಕಡೆಗೆ ಎಸೆದರು. ಆದರೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಕೈಯಲ್ಲಿ ಚೆಂಡು ಇಲ್ಲದ ಹೊರತಾಗಿಯೂ ಬರೀಗೈಯಲ್ಲಿ ಥ್ರೋ ಮಾಡಿದಂತೆ ಆ್ಯಕ್ಷನ್ ಮಾಡಿದರು. ಕೊಹ್ಲಿಯ ಈ ಕೃತ್ಯವನ್ನು ಫೀಲ್ಡ್ ಅಂಪೈರ್ಗಳು ಸರಿಯಾಗಿ ಗಮನಿಸಿದ್ದರೆ, ನಿಯಮಗಳ ಪ್ರಕಾರ ಕೊಹ್ಲಿ ಮಾಡಿದ್ದು ತಪ್ಪು. ಇದಕ್ಕೆ ದಂಡವಾಗಿ ಎದುರಾಳಿ ತಂಡಕ್ಕೆ 5 ರನ್ಗಳನ್ನು ನೀಡುತ್ತಿದ್ದರು. ಆದರೆ ಈ ಘಟನೆ ಅಂಪೈರ್ಗಳ ಗಮನಕ್ಕೆ ಬರದಿರುವ ಕಾರಣ ಟೀಂ ಇಂಡಿಯಾ ದಂಡದಿಂದ ಪಾರಾಯಿತು. ಈ ಘಟನೆಯನ್ನು ಮುಂದಿಟ್ಟು ಬಾಂಗ್ಲಾ ಆಟಗಾರರು ಇದೀಗ ಕೊಹ್ಲಿ ಮತ್ತು ಫೀಲ್ಡ್ ಅಂಪೈರ್ಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಒಂದೊಮ್ಮೆ ಈ ಕೃತ್ಯವನ್ನು ಅಂಪೈರ್ಗಳು ಗಮನಿಸಿದ್ದರೆ ಬಾಂಗ್ಲಾದೇಶಕ್ಕೆ 5 ರನ್ ಪೆನಾಲ್ಟಿ ರೂಪದಲ್ಲಿ ಸಿಗುತ್ತಿತ್ತು. ಇದು ಬಾಂಗ್ಲಾ ಗೆಲುವಿಗೂ ಕಾರಣವಾಗುತ್ತಿತ್ತು.
ಆರೋಪಗಾರನೇ ಆರೋಪಿ
ಕೊಹ್ಲಿ ವಿರುದ್ಧ ಈ ಆರೋಪ ಹೊರಿಸಿರುವ ನೂರುಲ್ ಹಸನ್ ಅವರೇ ಈ ಟಿ20 ವಿಶ್ವ ಕಪ್ನಲ್ಲಿ ಸ್ವತಃ ಎರಡು ಬಾರಿ ನಿಯಮ ಉಲ್ಲಂಘಿಸಿದ್ದಾರೆ. ಇದಕ್ಕೆ ದಂಡವೂ ಬಿದ್ದಿದೆ. ನೂರುಲ್ ಹಸನ್ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯಗಳಲ್ಲಿ ನಿಯಮ ಉಲ್ಲಂಘಿಸಿದ್ದರು.
ಇದನ್ನೂ ಓದಿ | IND VS PAK | ಬಾಂಗ್ಲಾ ಎದುರು ಭಾರತಕ್ಕೆ ಗೆಲುವು; ಅಂಪೈರ್ ಎರಾಸ್ಮಸ್ ವಿರುದ್ಧ ಪಾಕ್ ಆಕ್ರೋಶ