Site icon Vistara News

Virat Kohli: ಗುಜರಾತ್​ ವಿರುದ್ಧ 6 ರನ್ ಬಾರಿಸಿದರೆ ವಿಶೇಷ ದಾಖಲೆ ಬರೆಯಲಿದ್ದಾರೆ ಕಿಂಗ್​ ಕೊಹ್ಲಿ

Virat Kohli

ಬೆಂಗಳೂರು: ಇಂದು(ಶನಿವಾರ) ನಡೆಯುವ ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಆಟಗಾರ ವಿರಾಟ್​ ಕೊಹ್ಲಿ(Virat Kohli) ಕೇವಲ 6 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ ವಿಶೇಷ ಮೈಲುಗಲ್ಲೊಂದನ್ನು ನಿರ್ಮಿಸಲಿದ್ದಾರೆ. 6 ರನ್​ ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 369 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 133.94 ಸ್ಟ್ರೈಕ್​ ರೇಟ್​ನಲ್ಲಿ 12494 ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 95 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಕೊಹ್ಲಿ ಸದ್ಯ ಆಡಿದ 10 ಇನಿಂಗ್ಸ್​ಗಳಿಂದ ಭರ್ತಿ 500 ರನ್​ ಬಾರಿಸಿದ್ದಾರೆ. ಆರೆಂಜ್​ ಕ್ಯಾಪ್​ ರೇಸ್​ನಲ್ಲಿ ಸದ್ಯ ದ್ವಿತೀಯ ಸ್ಥಾನಿಯಾಗಿದ್ದಾರೆ. ಇಂದಿನ ಪಂದ್ಯದಲ್ಲಿ 10 ರನ್​ ಗಳಿಸಿದರೆ ಚೆನ್ನೈ ತಂಡದ ನಾಯಕ ಋತುರಾಜ್​ ಗಾಯಕ್ವಾಡ್(509)​ ದಾಖಲೆ ಮುರಿಯಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12494* ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ವಿರಾಟ್​ ಕೊಹ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಇದುವರೆಗೆ 2924 ರನ್​ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್​ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್​ ಗಳಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಅವರ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಬ್ಯಾಟರ್​ಗಳಿಗೆ ಇದು ಸ್ವರ್ಗ. ಪಂದ್ಯದಲ್ಲಿ ದೊಡ್ಡ ಮೊತ್ತ ಹರಿದು ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

ಇನ್ನೂ ಇದೆ ಪ್ಲೇ ಆಫ್​ ಅವಕಾಶ


ಸದ್ಯ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನಿಯಾಗಿದ್ದರೂ ಕೂಡ ಆರ್​ಸಿಬಿಯ(Royal Challengers Bengaluru) ಪ್ಲೇ ಆಫ್​ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್​ಸಿಬಿಯ ಪ್ಲೇ ಆಫ್​ ಆಸೆ ಜೀವಂತವಾಗಿಯೇ ಇದೆ.

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್​ಸಿಬಿಗೆ ಪ್ಲೇ ಆಫ್​ ಟಿಕೆಟ್​ ಸಿಗಲಿದೆ. ಈಗಾಗಲೇ 10 ಪಂದ್ಯ ಆಡಿದ್ದು, 3 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 4 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಜತೆಗೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ.

ಉಳಿದಿರುವ 4 ಪಂದ್ಯಗಳ ಪೈಕಿ 2 ಪಂದ್ಯಗಳನ್ನು ಆರ್​ಸಿಬಿ ತವರಿನಲ್ಲಿ ಆಡಲಿದೆ. ಒಂದು ಪಂದ್ಯ ಹಾಲಿ ಚಾಂಪಿಯನ್​ ಚೆನ್ನೈ ವಿರುದ್ಧ. ಇದು ಆರ್​ಸಿಬಿಗೆ ಕೊನೆಯ ಲೀಗ್​ ಪಂದ್ಯವಾಗಿರಲಿದೆ. ಮೇ 18ರಂದು ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಇಂದು ನಡೆಯುವ ಪಂದ್ಯ. ಇಂದು ಆರ್​ಸಿಬಿ ಸೋತರೆ, ಅಥವಾ ಪಂದ್ಯ ಮಳೆಯಿಂದ ರದ್ದಾದರೆ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

Exit mobile version