ಬೆಂಗಳೂರು: ಆಗಸ್ಟ್ 30ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್(Asia Cup 2023)ಗೆ ಎಲ್ಲ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಟೀಮ್ ಇಂಡಿಯಾ ಕೂಡ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಅಭ್ಯಾಸ ಮತ್ತು ಫಿಟ್‌ನೆಸ್ ಪರೀಕ್ಷೆಯಾದ ಯೋ-ಯೋ ಟೆಸ್ಟ್‌ಗೆ(Yo-Yo Test) ಒಳಗಾಗಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸುತ್ತಿದ್ದಾರೆ. ಭಾರತ ತಂಡದ ಸ್ಟಾರ್ ಆಟಗಾರ ಮತ್ತು ಸದಾ ಫಿಟ್ನೆಸ್ನಲ್ಲಿರುವ ವಿರಾಟ್ ಕೊಹ್ಲಿ(Virat Kohli) ಅವರು ಗುರುವಾರ ಯೋ-ಯೋ ಟೆಸ್ಟ್‌ಗೆ ಒಳಪಟ್ಟಿದ್ದಾರೆ.
ಯೋ-ಯೋ ಟೆಸ್ಟ್‌ಗೆ ಒಳಗಾದ ಕೊಹ್ಲಿ ಈ ಟೆಸ್ಟ್ನಲ್ಲಿ 17.2 ಅಂಕ ಪಡೆಯುವ ಮೂಲಕ ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.(Virat Kohli passed the Yo-Yo Test) ಈ ವಿಚಾರವನ್ನು ಸ್ವತಃ ಕೊಹ್ಲಿ ಅವರೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಏಷ್ಯಾ ಕಪ್ಗೆ ಆಯ್ಕೆಯಾದ ಎಲ್ಲ 17 ಮಂದಿ ಸದಸ್ಯರಿಗೂ ಕೂಡ ಈ ಯೋ-ಯೋ ಟೆಸ್ಟ್ ಮಾಡಲಾಗುತ್ತದೆ.
ಇದೇ ವರ್ಷಾರಂಭದಲ್ಲಿ ನಡೆದ ಬಿಸಿಸಿಐಯ ಮಹತ್ವದ ಸಭೆಯಲ್ಲಿ ಆಟಗಾರರ ಫಿಟ್‌ನೆಸ್ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಆಟಗಾರರ ಆಯ್ಕೆಗೆ ಮಾನದಂಡವಾಗಿರುವ ಯೋ-ಯೋ ಟೆಸ್ಟ್ ಮತ್ತು ಇದರೊಂದಿಗೆ ಡೆಕ್ಸಾ ಪರೀಕ್ಷೆಯನ್ನು (ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್-ರೇ, ಡ್ಯುಯೆಲ್ ಎನರ್ಜಿ ಎಕ್ಸ್-ರೇ ಎಬಾಪ್ಟಿಮೆಟ್ರಿ) ಕಡ್ಡಾಯಗೊಳಿಸಲಾಯಿತು.
2022ರಲ್ಲಿ ಭಾರತೀಯ ಕ್ರಿಕೆಟ್ ನಿರ್ವಹಣೆ ಹೇಳಿಕೊಳ್ಳುವಂಥ ಮಟ್ಟದಲ್ಲಿ ಇಲ್ಲದೇ ಇದ್ದುದರಿಂದ ಮತ್ತು ಅನೇಕ ಸ್ಟಾರ್ ಆಟಗಾರರು ಪದೇಪದೆ ಗಾಯಕ್ಕೀಡಾಗುತ್ತಿದ್ದರಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿತ್ತು. ಜತೆಗೆ ಏಕದಿನ ವಿಶ್ವಕಪ್ಗೂ ಆಯ್ಕೆ ಮಾಡುವ ಆಟಗಾರರ ಫಿಟ್‌ನೆಸ್ ಕಾಯ್ದುಕೊಳ್ಳುವ ವಿಚಾರದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚಿಸಲಾಗಿತ್ತು.
ಇದನ್ನೂ ಓದಿ Asia Cup 2023: ಏಷ್ಯಾಕಪ್ಗೆ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಯೋ-ಯೋ ಟೆಸ್ಟ್ ಕಡ್ಡಾಯ
ಎಲ್ಲ ಆಟಗಾರರು ಯೋ-ಯೋ ಟೆಸ್ಟ್‌ಗೆ ಒಳಪಡಬೇಕಿದೆ. ಈ ಮೂಲಕ ತಮ್ಮ ಫಿಟ್‌ನೆಸ್ ಸಾಮರ್ಥ್ಯವನ್ನು ತೋರಿಸಬೇಕಿದೆ. ಇಲ್ಲಿ ಪಾಸಾದ ಆಟಗಾರರಿಗೆ ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ. ಒಂದೊಮ್ಮೆ ವಿಫಲವಾದರೆ ಈ ಆಟಗಾರು ಬೆಂಚ್ ಕಾಯುವುದು ಅನಿವಾರ್ಯವಾಗಿದೆ. ಅಲ್ಲದೆ ಫಿಟ್‌ನೆಸ್ ಪಾಸ್ ಆಗುವವರೆಗೆ ತಮಡದಿಂದ ದೂರವೇ ಉಳಿಯಬೇಕಾದಿತು. ಹೀಗಾಗಿ ಇದು ಎಲ್ಲ ಆಟಗಾರರಿಗೂ ಸವಾಲಿನ ಪರೀಕ್ಷೆಯಾಗಿದೆ.
ಏನಿದು ಯೋ-ಯೋ, ಡೆಕ್ಸಾ ಟೆಸ್ಟ್
ಯೋ-ಯೋ ಟೆಸ್ಟ್ ಎಂದರೆ ಇದು 23 ಹಂತಗಳ ಪರೀಕ್ಷೆ, ಕ್ರಿಕೆಟಿಗರಿಗೆ 5ನೇ ಹಂತದಿಂದ ಆರಂಭ, ಕ್ರಿಕೆಟಿಗ 20 ಪ್ಲಸ್ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದು. ಹಂತಗಳ ಸಂಖ್ಯೆ ಹೆಚ್ಚಿದಂತೆ ದೂರವನ್ನು ಕ್ರಮಿಸುವ ಸಮಯ ಕಡಿಮೆಯಾಗುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ. ಇದು ಯೋ-ಯೋ ಟೆಸ್ಟ್
ಡೆಕ್ಸಾ(dexa test) ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯ. ಇಲ್ಲಿ ನಡೆಸಲಾಗುವ ಎಕ್ಸ್-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷಗಳ ಪರೀಕ್ಷೆಯಾಗಿದೆ.
ಆಗಸ್ಟ್ 29ರ ಬಳಿಕ ಟೀಮ್ ಇಂಡಿಯಾ ಲಂಕಾ ಪ್ರಯಾಣ
ಆಗಸ್ಟ್ 29ರ ವರೆಗೆ ಎನ್ಸಿಎಯಲ್ಲಿ ಶಿಬಿರ ನಡೆಯಲಿದ್ದು ಇದು ಮುಕ್ತಾಯ ಕಂಡ ಬೆನ್ನಲ್ಲೇ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಸಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಪ್ಟಂಬರ್ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿದೆ.