Site icon Vistara News

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Virat Kohli

ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಸ್ಟಾರ್​ ಆಟಗಾರ, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ದಾಖಲೆಯೊಂದನ್ನು ಬರೆದಿದ್ದಾರೆ. 6 ರನ್​ ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೋಹಿತ್​ ಶರ್ಮ ಎಸೆದ ಇನಿಂಗ್ಸ್​ನ ಮೊದಲ ಓವರ್​ನ ದ್ವಿತೀಯ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟುವ ಮೂಲಕ ​ ವಿರಾಟ್​ ಕೊಹ್ಲಿ ರನ್​ ಖಾತೆ ತೆರೆದರು. ಜತೆಗೆ ಈ ರನ್​ ಮೂಲಕ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12536* ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 370 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 134.00 ಸ್ಟ್ರೈಕ್​ ರೇಟ್​ನಲ್ಲಿ 12536* ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 95 ಅರ್ಧಶತಕಗಳನ್ನು ಸಿಡಿಸಿದ್ದಾರೆ. 1122 ಬೌಂಡರಿ ಮತ್ತು 395 ಸಿಕ್ಸರ್​ಗಳು ಇವರ ಬ್ಯಾಟ್​ನಿಂದ ಹೊರಹೊಮ್ಮಿದೆ.

ಇದನ್ನೂ ಓದಿ IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

​ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

Exit mobile version