ನ್ಯೂಯಾರ್ಕ್: ಟಿ20 ವಿಶ್ವಕಪ್(T20 World Cup) ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಹೊಂದಿರುವ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ(Virat Kohli) ಇದೀಗ ಮತ್ತೊಂದು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲು ಸಜ್ಜಾಗಿ ನಿಂತಿದ್ದಾರೆ. ಈ ಬಾರಿ ಕೊಹ್ಲಿ ಕಣ್ಣಿಟ್ಟಿರುವ ದಾಖಲೆ ಎಂದರೆ ಬೌಂಡರಿಯದ್ದು.
ಇಂದು(ಬುಧವಾರ) ನಡೆಯುವ ಐರ್ಲೆಂಡ್(India vs Ireland) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಅವರ ದಾಖಲೆಯನ್ನು ಮುರಿದು ಅಗ್ರಸ್ಥಾನ ಪಡೆಯಲಿದ್ದಾರೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 103* ಬೌಂಡರಿ ದಾಖಲಿಸಿದ್ದಾರೆ.
ಟ20 ವಿಶ್ವಕಪ್ನಲ್ಲಿ ಅತ್ಯಧಿಕ ಬೌಂಡರಿ ಸಾಧಕರು
ಆಟಗಾರ | ದೇಶ | ಇನಿಂಗ್ಸ್ | ಬೌಂಡರಿ |
ಮಹೇಲಾ ಜಯವರ್ಧನೆ | ಶ್ರೀಲಂಕಾ | 31 | 111 |
ವಿರಾಟ್ ಕೊಹ್ಲಿ | ಭಾರತ | 27 | 103* |
ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 35 | 101 |
ರೋಹಿತ್ ಶರ್ಮ | ಭಾರತ | 36 | 91* |
ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 34 | 86 |
ಕ್ರಿಸ್ ಗೇಲ್ | ವೆಸ್ಟ್ ಇಂಡೀಸ್ | 31 | 78 |
ಜಾಸ್ ಬಟ್ಲರ್ | ಇಂಗ್ಲೆಂಡ್ | 27 | 69* |
ಕೇನ್ ವಿಲಿಯಮ್ಸನ್ | ನ್ಯೂಜಿಲ್ಯಾಂಡ್ | 25 | 68* |
ಬ್ರೆಂಡನ್ ಮೆಕಲಮ್ | ನ್ಯೂಜಿಲ್ಯಾಂಡ್ | 25 | 67 |
ಕುಮಾರ್ ಸಂಗಕ್ಕಾರ | ಶ್ರೀಲಂಕಾ | 31 | 63 |
ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿದೆ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್, ಉದ್ಘಾಟನ ಆವೃತ್ತಿಯ ಟಿ20 ವಿಶ್ವಕಪ್ನಿಂದ ಇದುವರೆಗೆ 35 ಸಿಕ್ಸರ್ ಬಾರಿಸಿದ್ದಾರೆ. ಇದೀಗ 2024 ರ ವಿಶ್ವ ಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ತಮ್ಮ ಸಿಕ್ಸರ್ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. 2007-2022ರ ವಿಶ್ವಕಪ್ ಆವೃತ್ತಿಯಲ್ಲಿ ರೋಹಿತ್ ಒಟ್ಟು 39 ಪಂದ್ಯಗಳನ್ನು ಆಡಿದ್ದಾರೆ.
ವರ್ಷದ ಏಕದಿನ ಪ್ರಶಸ್ತಿ ಗೆದ್ದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಕೆಲವು ದಿನಗಳ ಹಿಂದಷ್ಟೇ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಕೊಹ್ಲಿ 2023ರ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 24 ಇನ್ನಿಂಗ್ಸ್‌ನಲ್ಲಿ 72.47ರ ಸರಾಸರಿಯಲ್ಲಿ 1,377 ರನ್ ಕಲೆಹಾಕಿದ್ದರು. 6 ಶತಕಗಳು ಮತ್ತು 8 ಅರ್ಧ ಶತಕಗಳು ಬಾರಿಸಿದ್ದರು.
2023ರಲ್ಲಿ ಭಾರತದ ಏಷ್ಯಾ ಕಪ್ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಸೂಪರ್-4 ಹಂತದ ಪಾಕಿಸ್ಥಾನ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ 94 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಏಕದಿನ ವಿಶ್ವಕಪ್‌ನಲ್ಲಿಯೂ 11 ಪಂದ್ಯಗಳಲ್ಲಿ 765 ರನ್ ಬಾರಿಸಿ ಗಮನ ಸೆಳೆದಿದ್ದರು. ಇದೇ ವೇಳೆ ಕಿವೀಸ್ ವಿರುದ್ಧದ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿ ಏಕದಿನದಲ್ಲಿ 50 ಶತಕಗಳ ಸಾಧನೆಗೈದಿದ್ದರು. ಈ ಮೂಲಕ ಸಚಿನ್ ಹೆಸರಿನಲ್ಲಿದ್ದ 49 ಶತಕಗಳ ದಾಖಲೆಯನ್ನು ಮುರಿದಿದ್ದರು. ಇದೀಗ ಟಿ20 ವಿಶ್ವಕಪ್‌ನಲ್ಲಿಯೂ ಅಮೋಘ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದ್ದಾರೆ.