ಮುಂಬಯಿ: ಐಸಿಸಿ ಟಿ20 ವಿಶ್ವ ಕಪ್ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಫೇಕ್ ಫೀಲ್ಡಿಂಗ್(ನಕಲಿ ಕ್ಷೇತ್ರರಕ್ಷಣೆ) ನಡೆಸಿದ ವಿಚಾರವಾಗಿ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದು, ಕೊಹ್ಲಿ ಮಾಡಿರುವುದು ಶೇ.100ರಷ್ಟು ಫೇಕ್ ಫೀಲ್ಡಿಂಗ್ ಎಂದಿದ್ದಾರೆ.
ಟ್ವಿಟರ್ನಲ್ಲಿ ಆಕಾಶ್ ಚೋಪ್ರಾ ತಮ್ಮ ಅಭಿಮಾನಿಗಳಿಗೆ ಫೇಕ್ ಫೀಲ್ಡಿಂಗ್ ನಿಯಮಗಳ ಕುರಿತು ಮಾಹಿತಿ ನೀಡುವ ವೇಳೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿರುವುದು ನಿಜ ಎಂದಿದ್ದಾರೆ. ಆದರೆ ಕೊಹ್ಲಿಯ ಈ ನಕಲಿ ಫೀಲ್ಡಿಂಗ್ ಪತ್ತೆ ಹಚ್ಚಿ ದಂಡ ವಿಧಿಸುವುದು ಅಂಪೈರ್ ಅವರ ಕೆಲಸ. ಆದರೆ ಇಲ್ಲಿ ಅದು ಆಗಿಲ್ಲ. ಅಂಪೈರ್‌ಗಳಿಗೆ ಈ ಘಟನೆ ಅರಿವಿಗೆ ಬಾರದ ಕಾರಣ ಕೊಹ್ಲಿ ಶಿಕ್ಷೆಯಿಂದ ಪಾರಾದರು. ಆದ್ದರಿಂದ ಈಗ ಆ ಘಟನೆಯ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.
“ಇದು ನೂರಕ್ಕೆ ನೂರರಷ್ಟು ಫೇಕ್ ಫೀಲ್ಡಿಂಗ್, ಕೊಹ್ಲಿ ಥ್ರೋ ಎಸೆಯುವಂತೆ ಆ್ಯಕ್ಷನ್ ಮಾಡಿರುವುದು ಸ್ಪಷ್ಟವಾಗಿದೆ. ಇದನ್ನು ಅಂಪೈರ್ ನೋಡಿದ್ದರೆ, ಭಾರತಕ್ಕೆ ಐದು ರನ್ ದಂಡ ವಿಧಿಸಲಾಗುತ್ತಿತ್ತು. ಆದರೆ ಅಂಪೈರ್ಗೆ ಇದು ಗಮನಕ್ಕೆ ಬರಲಿಲ್ಲ. ಹಾಗೆಯೇ ಯಾರೂ ಸಹ ಇದನ್ನು ಗಮನಿಸಲಿಲ್ಲ. ಆದ್ದರಿಂದ ಮುಗಿದು ಹೋದ ಅಧ್ಯಾಯದ ಬಗ್ಗೆ ಮಾತನಾಡಿ ಏನು ಪ್ರಯೋಜನವಿಲ್ಲ” ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಏನಿದು ವಿವಾದ?
ಬಾಂಗ್ಲಾದೇಶದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ಗಳು ಸರಿಯಾಗಿ ಗಮನಿಸಿದ್ದರೆ ನಮಗೆ ನಿರ್ಣಾಯಕ 5 ರನ್ ಪೆನಾಲ್ಟಿ ರೂಪದಲ್ಲಿ ಸಿಗುತ್ತಿದ್ದವು. ಇದರಿಂದ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ನೂರುಲ್ ಹಸನ್ ಗುರುವಾರ ಕೊಹ್ಲಿ ವಿರುದ್ಧ ಆರೋಪಿಸಿದ್ದರು. ಜತೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೂ ಟೀಮ್ ಇಂಡಿಯಾ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಗಿತ್ತು.
ಇದನ್ನೂ ಓದಿ | Virat Kohli | ಟಿ20 ವಿಶ್ವ ಕಪ್ ವಿರಾಟ್ ಕೊಹ್ಲಿಗೆ ಹೇಳಿ ಮಾಡಿಸಿದಂತಿದೆ; ಅಖ್ತರ್ ಹೀಗೆ ಹೇಳಿದ್ದು ಯಾಕೆ?