ಚೆನ್ನೈ: ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ನಾಟು ನಾಟು(natu natu) ಹಾಡಿಗೆ ಮೈದಾನದಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದಿದ್ದ ವಿರಾಟ್ ಕೊಹ್ಲಿ(Virat Kohli), ಅಂತಿಮ ಏಕದಿನ ಪಂದ್ಯದಲ್ಲಿಯೂ ನೃತ್ಯ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಶಾರುಖ್ ಖಾನ್(Shah Rukh Khan) ಅಭಿನಯದ ಲುಂಗಿ ಡ್ಯಾನ್ಸ್(lungi dance) ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕೊಹ್ಲಿ ನೆರೆದಿದ್ದ ಪ್ರೇಕ್ಷಕರನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್ ನಡೆಸಲು ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಬರುತ್ತಿದ್ದ ವೇಳೆ ಲುಂಗಿ ಡ್ಯಾನ್ಸ್ ಹಾಡನ್ನು ಹಾಕಲಾಗಿತ್ತು. ಇದೇ ವೇಳೆ ವಿರಾಟ್ ಕೊಹ್ಲಿ ಒಂದೆರಡು ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಕ್ರಿಕೆಟ್ ಪಂದ್ಯದಲ್ಲಿ ಡ್ಯಾನ್ಸ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ದಾಖಲೆ ಬರೆದ ವಿರಾಟ್ ಕೊಹ್ಲಿ
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶಕತ ಬಾರಿಸಿ ಮಿಂಚಿದ್ದರು. ಒಟ್ಟು 72 ಎಸೆತ ಎದುರಿಸಿ 54 ರನ್ ಬಾರಿಸಿದರು. ಇದರಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಈ ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 65ನೇ ಅರ್ಧಶತಕ ಪೂರೈಸಿದರು. ಜತೆಗೆ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಅರ್ಧಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಆಸೀಸ್ ವಿರುದ್ಧ 18 ಅರ್ಧಶತಕ ಬಾರಿಸಿದ ವೆಸ್ಟ್ ಇಂಡೀಸ್ನ ದಿಗ್ಗಜ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಆಸೀಸ್ ವಿರುದ್ಧ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಅವರು ಆಸೀಸ್ ವಿರುದ್ಧ 24 ಅರ್ಧಶತಕ ಬಾರಿಸಿದರೆ. ಕೊಹ್ಲಿ 19 ಅರ್ಧಶತಕಗಳೊಂದಿಗೆ 3ನೇ ಸ್ಥಾನ ಅಲಂಕರಿಸಿದ್ದಾರೆ.