ಮುಂಬಯಿ: ಶನಿವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದ ಟೀಮ್ ಇಂಡಿಯಾದ ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಧವನ್ಗೆ(shikhar dhawan) ಸಹ ಆಟಗಾರ ವಿರಾಟ್ ಕೊಹ್ಲಿ(Virat Kohli) ಭಾವನಾತ್ಮಕ ಸಂದೇಶದ ಮೂಲಕ ನಿವೃತ್ತ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಟ್ವಿಟರ್ ಎಕ್ಸ್ನಲ್ಲಿ ಶಿಖರ್ ಧವನ್ ಬಗ್ಗೆ ಬರೆದುಕೊಂಡಿರುವ ಕೊಹ್ಲಿ, ‘ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಭಯಮುಕ್ತ ಪ್ರದರ್ಶನ ನೀಡಿದ್ದೀರಿ. ಇದೇ ಕಾರಣಕ್ಕೆ ಭಾರತದ ಅತ್ಯಂತ ವಿಶ್ವಾಸಾರ್ಹ ಓಪನರ್‌ಗಳಲ್ಲಿ ಒಬ್ಬರಾಗಲು ಸಾಧ್ಯವಾಯಿತು. ನೀವು ನಮಗೆ ಪಾಲಿಸಲು ಲೆಕ್ಕವಿಲ್ಲದಷ್ಟು ನೆನಪುಗಳನ್ನು ನೀಡಿದ್ದೀರಿ. ಆಟದ ಮೇಲಿನ ನಿಮ್ಮ ಉತ್ಸಾಹ, ನಿಮ್ಮ ಕ್ರೀಡಾ ಮನೋಭಾವ ಮತ್ತು ನಿಮ್ಮ ಟ್ರೇಡ್‌ಮಾರ್ಕ್ ಸ್ಮೈಲ್ ತಪ್ಪಿಹೋಗುತ್ತದೆ. ಆದರೆ, ನಿಮ್ಮ ಪರಂಪರೆಯು ಜೀವಿಸುತ್ತದೆ. ನೆನಪುಗಳು, ಮರೆಯಲಾಗದ ಪ್ರದರ್ಶನಗಳು ಮತ್ತು ಯಾವಾಗಲೂ ನಿಮ್ಮ ಹೃದಯದಿಂದ ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು ಗಬ್ಬರ್. ಮೈದಾನದ ಹೊರಗೆ ನಿಮ್ಮ ಮುಂದಿನ ಇನ್ನಿಂಗ್ಸ್ಗೆ ನಿಮಗೆ ಶುಭ ಹಾರೈಸುತ್ತೇನೆ!” ಎಂದು ಕೊಹ್ಲಿ ಭಾವನಾತ್ಮವಾಗಿ ಬರೆದುಕೊಂಡಿದ್ದಾರೆ. ಅಂಕಿ-ಅಂಶಗಳ ಪ್ರಕಾರ 2013ರ ಜೂನ್ನಿಂದ 2019ರವರೆಗೆ ಧವನ್ (23), ಕೊಹ್ಲಿ (49) ಮತ್ತು ರೋಹಿತ್ (30) ಒಟ್ಟು 102 ಶತಕ ಸಿಡಿಸಿದ್ದರು.
2013ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಮೊಹಾಲಿ ಟೆಸ್ಟ್ ಕ್ರಿಕೆಟ್ನಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಶಿಖರ್ ಧವನ್ ಭಾರತದ ಕ್ರಿಕೆಟ್‌ಗೆ ಹೆಚ್ಚು ಪರಿಚಿತರಾದರು. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದುಕೊಂಡಿದ್ದ ಧವನ್, 174 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್ ಸಹಿತ 187 ರನ್ ಸಿಡಿಸಿದ್ದರು. 85 ಎಸೆತಗಳಲ್ಲೇ ಶತಕ ಪೂರೈಸುವ ಮೂಲಕ ಪದಾರ್ಪಣೆಯ ಟೆಸ್ಟ್ನಲ್ಲಿ ಅತಿವೇಗದ ಶತಕ ಸಿಡಿಸಿದ ಸಾಧಕ ಎನಿಸಿದ್ದರು. ಅಲ್ಲದೆ ಪದಾರ್ಪಣೆಯ ಟೆಸ್ಟ್ನಲ್ಲಿ ಭಾರತ ಪರ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.
ಇದನ್ನೂ ಓದಿ Shikhar Dhawan: ಶಿಖರ ಸಾಧನೆಯ ವೀರ ಈ ಶಿಖರ್ ಧವನ್; ದಾಖಲೆ ಪಟ್ಟಿ ಹೀಗಿದೆ
38 ವರ್ಷದ ಧವನ್ ಶನಿವಾರ ಬೆಳಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಧವನ್ ಐಸಿಸಿ ಟೂರ್ನಿಗಳಲ್ಲಿ ಸದಾ ಭಾರತಕ್ಕೆ ಶ್ರೇಷ್ಠ ಇನ್ನಿಂಗ್ಸ್ ಒದಗಿಸುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಮಿಸ್ಟರ್ ಐಸಿಸಿ ಎಂದು ಕರೆಯಲಾಗುತ್ತದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಧವನ್ ಪಾಲಿಗೆ ನೆಚ್ಚಿನ ಟೂರ್ನಿಯಾಗಿತ್ತು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ 363 ರನ್ ಸಿಡಿಸಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸರಣಿಶ್ರೇಷ್ಠರಾಗಿದ್ದರು. 2017ರ ಆವೃತ್ತಿಯಲ್ಲೂ ಗರಿಷ್ಠ 338 ರನ್ ಸಿಡಿಸಿದ್ದರು.