ಮುಂಬಯಿ : ಭಾರತ ತಂಡದ ಮಾಜಿ ನಾಯಕ ಹಾಗೂ ರನ್ ಮಾಂತ್ರಿಕ ವಿರಾಟ್ ಕೊಹ್ಲಿ, ಭಾರತ ತಂಡಕ್ಕಾಗಿ ಮಾತ್ರವಲ್ಲ, ತಮಗಾಗಿಯೂ ರನ್ ಗಳಿಸಬೇಕಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಅವರು ಮತ್ತೆ ಫಾರ್ಮ್‌ಗೆ ಮರಳುವುದು ಅನಿವಾರ್ಯ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಮೂರು ವಾರಗಳ ವಿಶ್ರಾಂತಿ ಬಳಿಕ ವಿರಾಟ್ ಕೊಹ್ಲಿ ಭಾನುವಾರ ಪಾಕಿಸ್ತಾನ ತಂಡದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ. ಈ ಪಂದ್ಯದಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡುವ ಮೂಲಕ ಮತ್ತೆ ದೊಡ್ಡ ಮೊತ್ತ ಬಾರಿಸಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ವಿಶ್ವಾಸ ಇರಿಸಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ “ವಿರಾಟ್ ಕೊಹ್ಲಿ ಭಾರತಕ್ಕೆ ರನ್ ಗಳಿಸುವಷ್ಟೇ ಆದ್ಯತೆಯಿಂದ ತಮಗಾಗಿಯೂ ರನ್ ಪೇರಿಸಬೇಕು. ಅವರು ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡಬಹುದು ಎಂಬ ವಿಶ್ವಾಸ ನಮಗಿದೆ. ಖಂಡಿತವಾಗಿಯೂ ಅವರು ಫಾರ್ಮ್‌ಗೆ ಮರಳಲಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರಾಟ್ ಕೊಹ್ಲಿ ಕೊನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು ೨೦೧೯ರಲ್ಲಿ. ಬಾಂಗ್ಲಾದೇಶ ವಿರುದ್ಧ ಕೋಲ್ಕೊತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೂರಂಕಿ ಮೊತ್ತ ದಾಖಲಿಸಿದ್ದರು. ಅಲ್ಲಿಂದ ಅವರು ಶತಕದ ಬರ ಎದುರಿಸುತ್ತಿದ್ದಾರೆ.
ಈ ಬಗ್ಗೆಯೂ ಮಾತನಾಡಿದ ಗಂಗೂಲಿ “ಕೊಹ್ಲಿ ಮತ್ತೆ ಶತಕ ಬಾರಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಅದಕ್ಕಾಗಿ ಅವರು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ,” ಎಂದು ಹೇಳಿದರು
ಇದನ್ನೂ ಓದಿ | ವಿರಾಟ್ ಕೊಹ್ಲಿ, ಎಂಎಸ್ ಧೋನಿ ವಿರುದ್ಧ ದೂರು ದಾಖಲಿಸಿದವರು ಜೀವ ಭಯದಿಂದ ವಾಪಸ್ ಪಡೆದರು!