Site icon Vistara News

ಕಿಂಗ್​ ಕೊಹ್ಲಿ ಕೈಬಿಟ್ಟ ಬಿಸಿಸಿಐ; ಟಿ20 ವಿಶ್ವಕಪ್​ಗೆ ನೂತನ ಆಟಗಾರನ ಆಯ್ಕೆ!

Virat Kohli

ಮುಂಬಯಿ: ವಿರಾಟ್​ ಕೊಹ್ಲಿ(Virat Kohli) ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ. ವಿಶ್ವದ ಅನೇಕ ದಿಗ್ಗಜ ಆಟಗಾರರ ಸಾಧನೆಗಳನ್ನು ಮುರಿದಿರುವ ಅವರಿಗೆ ಕಿಂಗ್ ಕೊಹ್ಲಿ​ ಎಂಬ ಪಟ್ಟ ನೀಡಲಾಗಿದೆ. ಆದರೆ ಇದೀಗ ಅವರ ಸ್ಥಾನಕ್ಕೆ ಬೇರೊಬ್ಬ ಉತ್ತರಾಧಿಕಾರಿಯನ್ನು ನೇಮಿಸಲು ಬಿಸಿಸಿಐ(BCCI) ಮುಂದಾಗಿದೆ.

ಹೌದು, ಮುಂದಿನ ವರ್ಷ ವೆಸ್ಟ್​ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ​ ನಡೆಯುವ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಅವರ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಯುವ ಆಟಗಾರನನ್ನು ಆಯ್ಕೆ ಮಾಡಿದ್ದು ಪ್ರಯೋಗ ನಡೆಸುತ್ತಿದೆ. ಕೊಹ್ಲಿ ಸ್ಥಾನಕ್ಕೆ ಬಿಸಿಸಿಐ ಆಯ್ಕೆ ಮಾಡಿರುವ ಆಟಗಾರನೆಂದರೆ ಅದು ಇಶಾನ್​ ಕಿಶನ್​(ishan kishan).

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲು ಕಂಡ ಬಳಿಕ ಇದುವರೆಗೂ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಇವರ ಜತೆಗೆ ಹಿರಿಯ ಆಟಗಾರ ರೋಹಿತ್​ ಶರ್ಮ, ಶಮಿ, ರಾಹುಲ್​ ಸೇರಿ ಇನ್ನೂ ಕೆಲ ಆಟಗಾರರನ್ನು ಬಿಸಿಸಿಐ ಟಿ20ಯಿಂದ ದೂರ ಇರಿಸಿ ಯುವ ಆಟಗಾರರರಿಗೆ ಮಣೆ ಹಾಕುತ್ತಲೇ ಬಂದಿದೆ. ಇದೀಗ ಮುಂದಿನ ವರ್ಷ ನಡೆಯುವ ಟಿ20ಯಲ್ಲಿಯೂ ಹಿರಿಯ ಆಟಗಾರಿಗೆ ಅವಕಾಶ ಸಿಗುವುದು ಕಷ್ಟ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿಸಿಸಿಐ ಈ ಯುವ ಆಟಗಾರರನ್ನು ಹಿರಿಯ ಆಟಗಾರರ ಕ್ರಮಾಂಕದಲ್ಲಿ ಆಡಿಸುವ ಮೂಲಕ ಬಲಿಷ್ಠ ತಂಡವನ್ನು ರೂಪುಗೊಳಿಸಲು ಮುಂದಾಗಿದೆ.

ಕೊಹ್ಲಿ ಸ್ಥಾನಕ್ಕೆ ಇಶಾನ್​

ಆರಂಭಿಕ ಆಟಗಾರನಾಗಿರುವ ಇಶಾನ್​ ಕಿಶನ್​ ಅವರನ್ನು ಕಳೆದ ಆಸೀಸ್​ ವಿರುದ್ಧದ ಟಿ20 ಸರಣಿಯಲ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಇಲ್ಲಿ ಅವರು ಕ್ಲಿಕ್​ ಕೂಡ ಆಗಿದ್ದರೂ. ಇದು ಬಿಸಿಸಿಐ ನಡೆಸಿದ ಪ್ರಯೋಗ ಎನ್ನುವುದು ಈಗ ತಿಳಿದುಬಂದಿದೆ. ಬಿಸಿಸಿಐ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಕೊಹ್ಲಿ ಅವರ ಟಿ20 ಕ್ರಿಕೆಟ್ ಜರ್ನಿ ಬಹುತೇಕ ಅಂತ್ಯ ಕಂಡಿದ್ದು ಅವರ ಸ್ಥಾನಕ್ಕೆ ಇಶಾನ್​ ಕಿಶನ್​ ಅವರನ್ನು ರೆಡಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಸಚಿನ್​​ಗೆ ಆಹ್ವಾನ

ಇಶಾನ್​ ಕಿಶನ್ 3ನೇ ಸ್ಥಾನಕ್ಕೆ ಒಪ್ಪಿಗೆ ಪಡೆದರೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಉಳಿದ ಸ್ಥಾನಗಳನ್ನು ತುಂಬುವ ಸಾಧ್ಯತೆಯಿದೆ. ಹೀಗಾಗಿ, ಕೊಹ್ಲಿಗೆ ಯಾವುದೇ ಸ್ಥಾನವಿಲ್ಲ. ಆದಾಗ್ಯೂ, ಕೊಹ್ಲಿಯ ಟಿ20 ಕ್ರಿಕೆಟ್​ ಯೋಜನೆಗಳ ಬಗ್ಗೆ ಬಿಸಿಸಿಐ ಮತ್ತು ಹಿರಿಯ ಸದಸ್ಯರು ಶೀಘ್ರದಲ್ಲೇ ಚರ್ಚೆ ನಡೆಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊಹ್ಲಿಯ ಟಿ20 ಸಾಧನೆ

ವಿರಾಟ್​ ಕೊಹ್ಲಿ ಇದುವರೆಗೆ ಭಾರತ ಪರ 115 ಟಿ20 ಪಂದ್ಯಗಳನ್ನು ಆಡಿ 4008 ರನ್‌ ಬಾರಿಸಿದ್ದಾರೆ. 122 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 1 ಶತಕ ಮತ್ತು 37 ಅರ್ಧಶತಕ ಬಾರಿಸಿದ್ದಾರೆ. 4 ವಿಕೆಟ್​ ಕೂಡ ಕೆಡವಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಕೊಹ್ಲಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಭಾರತ ಕಪ್​ ಗೆಲ್ಲುವಲ್ಲಿ ವಿಫಲವಾಗಿತ್ತು.

Exit mobile version