ನವ ದೆಹಲಿ : ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ವಿಶ್ವ ಕ್ರಿಕೆಟ್ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಏಕದಿನ ಮಾದರಿಯ ಕ್ರಿಕೆಟ್ಗೆ ಸೋಮವಾರ ವಿದಾಯ ಹೇಳಿದ್ದಾರೆ. ಅವರಿಗೆ ಭಾರತ ತಂಡದ ಮಾಜಿ ನಾಯಕ Virat Kohli ಕೇವಲ ಒಂದು ವಾಕ್ಯದ ಶುಭಾಶಯ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಪ್ರಸ್ತುತ ಫಾರ್ಮ್ ಕಳೆದುಕೊಂಡಿದ್ದು ವಿಶ್ವ ಕ್ರಿಕೆಟ್ ಕ್ಷೇತ್ರದ ಚರ್ಚೆಯ ವಸ್ತುವಾಗಿದ್ದಾರೆ. ಒಂದು ಕಾಲದ ರನ್ ಮಷಿನ್ ಈಗ ಸಿಂಗಲ್ ರನ್ ಗಳಿಸಲೂ ಪರದಾಡುತ್ತಿರುವುದು ಎಲ್ಲರ ಆತಂಕದ ವಿಷಯ. ಕೆಲವರು ಅವರ ಬಗ್ಗೆ ಕನಿಕರ ವ್ಯಕ್ತಪಡಿಸಿ ಕೆಲವೇ ದಿನಗಳಲ್ಲಿ ಫಾರ್ಮ್ಗೆ ಮರಳಲಿದ್ದಾರೆ ಎಂಬುದಾಗಿ ಭರವಸೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅವರನ್ನು ತಂಡದಿಂದ ಕೈ ಬಿಡಬೇಕು, ಹಿಂದಿನ ಫಾರ್ಮ್ ನೋಡಿ ಅವಕಾಶ ಕೊಡುವುದು ತಪ್ಪು ಎಂದೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ಈಗ ಕೊಡುವ ಪ್ರತಿ ಹೇಳಿಕೆಗಳಿಗೂ ವಿಶೇಷ ಅರ್ಥ ಬರುತ್ತದೆ. ಅಂತೆಯೇ ಏಕದಿನ ಮಾದರಿಗೆ ವಿದಾಯ ಹೇಳಿರುವ ಸ್ಟೋಕ್ಸ್ಗೂ ಅವರು ಏನು ಹೇಳಿದ್ದಾರೆ ಎಂಬ ಕೌತುಕ ಇದ್ದೇ ಇರುತ್ತದೆ.
ಏನು ಹೇಳಿದರು ಕೊಹ್ಲಿ?
ಬೆನ್ಸ್ಟೋಕ್ಸ್ ಇನ್ಸ್ಟಾಗ್ರಾಮ್ನಲ್ಲಿ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿರುವ ಪತ್ರವನ್ನು ಪ್ರಕಟಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದೆ ವಿರಾಟ್ ಕೊಹ್ಲಿ “ನಾನು ಇದುವರೆಗೆ ಕ್ರಿಕೆಟ್ ಆಡಿರುವ ನನ್ನ ಎದುರಾಳಿ ತಂಡದ ಆಟಗಾರರಲ್ಲಿ ನೀನೊಬ್ಬ ಗಟ್ಟಿ ಅಸಾಮಿ” ಎಂದು ಅವರು ಬರೆದುಕೊಂಡಿದ್ದಾರೆ. ಜತೆಗೆ ಗೌರವವನ್ನೂ ಸೂಚಿಸಿದ್ದಾರೆ.
ಮೂರು ಮಾದರಿಯಲ್ಲಿ ಅಡಿದರೆ ಫಾರ್ಮ್ ಇಟ್ಟುಕೊಳ್ಳುವುದು ಕಷ್ಟ ಎಂಬುದು ವಿದಾಯ ಹೇಳಿರುವ ಬೆನ್ ಸ್ಟೋಕ್ಸ್ ಅವರ ಅಭಿಪ್ರಾಯ. ವಿರಾಟ್ ಕೊಡ ಸದ್ಯ ಫಾರ್ಮ್ ಕಳೆದುಕೊಂಡಿದ್ದು ಯಾವುದಾದರೂ ಒಂದು ಮಾದರಿಯಲ್ಲಿ ಗಟ್ಟಿಯಾಗಿ ತಳವೂರಲು ಬೆನ್ ಸ್ಟೋಕ್ಸ್ ಹಾದಿ ಹಿಡಿಯುವರೇ ಎಂಬುದು ಸದ್ಯದ ಚರ್ಚೆ.
ಬೆನ್ ಸ್ಟೋಕ್ಸ್ ಏಕದಿನ ಬ್ಯಾಟಿಂಗ್ ಸಾಧನೆ
ಸ್ಟೋಕ್ಸ್ ಇದುವರೆಗೆ 104 ಏಕದಿನ ಪಂದ್ಯಗಳಲ್ಲಿ ಆಡಿದ್ದು, 40ರ ಸರಾಸರಿಯಲ್ಲಿ 2919 ರನ್ ಬಾರಿಸಿದ್ದಾರೆ. ಅಜೇಯ 102 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್. ಅಂತೆಯೇ ಬೌಲಿಂಗ್ನಲ್ಲಿ 74 ವಿಕೆಟ್ಗಳನ್ನು ಕಬಳಿಸಿದ್ದು, ಒಂದು ಬಾರಿ ಐದು ವಿಕೆಟ್ ಗೊಂಚಲನ್ನೂ ಪಡೆದುಕೊಂಡಿದ್ದಾರೆ.
ಬೆನ್ ಸ್ಟೋಕ್ಸ್ 2019ರ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಬಾರಿಸಿದ ಅಜೇಯ 84 ರನ್ ಅವರ ವೃತ್ತಿ ಕ್ರಿಕೆಟ್ನ ಅಮೋಘ ಇನಿಂಗ್ಸ್. ಆ ಅಮೂಲ್ಯ ರನ್ಗಳ ನೆರವಿನಿಂದ ಇಂಗ್ಲೆಂಡ್ ತಂಡ ವಿಶ್ವ ಕಪ್ ತನ್ನದಾಗಿಸಿಕೊಂಡಿತ್ತು.
ಇದನ್ನೂ ಓದಿ | ODI CRICKET | ಏಕದಿನ ಮಾದರಿಗೆ ವಿದಾಯ ಹೇಳಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್