ಮುಂಬಯಿ: ಇದೇ ತಿಂಗಳ 26ಕ್ಕೆ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್(paris olympics) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ವಿಶೇಷವಾಗಿ ಹಾರೈಸುವ ಮೂಲಕ ಸ್ಫೂರ್ತಿ ತುಂಬಿದ್ದಾರೆ. ಈ ವಿಡಿಯೊವನ್ನು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಭಾರತ, ಇಂಡಿಯಾ, ಹಿಂದಿನ ಹೆಸರು ಹಿಂದೂಸ್ಥಾನ. ಒಂದು ಕಾಲದಲ್ಲಿ ಭಾರತವನ್ನು ಪ್ರಪಂಚದಾದ್ಯಂತ ಹಾವಾಡಿಗರು ಮತ್ತು ಆನೆಗಳ ನಾಡು ಎಂದು ಮಾತ್ರ ನೋಡುತ್ತಿದ್ದರು. ಆದರೆ, ಈಗ ಇದು ಬದಲಾಗಿದೆ. ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಗ್ಲೋಬಲ್ ಟೆಕ್ ಹಬ್ ಎಂದು ಕರೆಯಲ್ಪಡುತ್ತೇವೆ. ಆರ್ಥಿಕವಾಗಿಯೂ ನಮ್ಮ ದೇಶ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದೆ. ನಾವು ಕ್ರಿಕೆಟ್, ಬಾಲಿವುಡ್, ಸ್ಟಾರ್ಟ್ ಅಪ್ ಯುನಿಕಾರ್ನ್ ಗಳಿಗೆ ಹೆಸರುವಾಸಿಯಾಗಿದ್ದೇವೆ. ಈಗ ನಾವೆಲ್ಲರೂ ಒಲಿಂಪಿಕ್ಸ್ ಕಡೆ ಗಮನಹರಿಸಿದ್ದೇವೆ. ನಮ್ಮ ದೇಶದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆಲ್ಲುವಂತಾಗಲಿ” ಎಂದು ಹಾರೈಸಿದ್ದಾರೆ.
“ನಮ್ಮ ಸಹೋದರ ಸಹೋದರಿಯರು ಪ್ಯಾರಿಸ್ನಲ್ಲಿ ಪದಕ ಗೆಲ್ಲುವ ಹಸಿವಿನಲ್ಲಿದ್ದಾರೆ. ಶತಕೋಟಿ ದೇಶವಾಸಿಗಳು ಆಶೀರ್ವಾದ ಅವರ ಮೇಲಿದೆ. ನಿಮ್ಮ ಪ್ರದರ್ಶನವನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಿವು ಮಾಡುವ ಸಾಧನೆಯಿಂದ ದೇಶದ ಹೆಸರು ಎಲ್ಲಡೆ ಪಸರಿಸಲಿದೆ” ಎಂದು ಕೊಹ್ಲಿ ಈ ವಿಡಿಯೊದಲ್ಲಿ ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ Paris Olympics 2024 : ಜಿಯೋಸಿನಿಮಾದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಉಚಿತ ನೇರಪ್ರಸಾರ
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 30 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್ ಸಂಸ್ಥೆ “ಇಂಡಿಯಾ ಹೌಸ್”(India House) ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.