ತಿರುವನಂತಪುರ: ರನ್ ಮಷಿನ್ ವಿರಾಟ್ ಕೊಹ್ಲಿ ಜನವರಿ 15ರಂದು ನಡೆದ ಶ್ರೀಲಂಕಾ ವಿರುದ್ಧ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ 110 ಎಸೆತಗಳಲ್ಲಿ ಅಜೇಯ 166 ರನ್ ಬಾರಿಸಿದ್ದಾರೆ. ಇದು ಏಕ ದಿನ ಮಾದರಿಯಲ್ಲಿ ಅವರ 45ನೇ ಶತಕ. ಅದೇ ರೀತಿ ಎರಡನೇ ಗರಿಷ್ಠ ಸ್ಕೋರ್. ಕಳೆದ ಎರಡು ವರ್ಷಗಳ ಕಾಲ ಶತಕ ಬಾರಿಸದೇ ಟೀಕೆಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ ಎರಡೇ ತಿಂಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ತಮ್ಮ ಪ್ರದರ್ಶನದ ಕುರಿತು ಕೊಂಕು ಮಾತನಾಡಿದ್ದ ಎಲ್ಲರಿಗೂ ಉತ್ತರ ಕೊಟ್ಟಿದ್ದಾರೆ. ಏತನ್ಮಧ್ಯೆ, ಭಾನುವಾರ ಪಂದ್ಯ ಮುಕ್ತಾಯಗೊಂಡ ಬಳಿಕ ತಮ್ಮ ಇತ್ತೀಚಿನ ಸಾಧನೆಗೆ ಕುಮಟಾ ಮೂಲದ ಥ್ರೋಡೌನ್ ಸ್ಪೆಷಲಿಸ್ಟ್ ಡಿ ರಾಘವೇಂದ್ರ ಮತ್ತು ಇತತರು ಕಾರಣ ಎಂದು ಹೇಳುವ ಮೂಲಕ ಅವರ ನೆರವನ್ನು ಸ್ಮರಿಸಿದ್ದಾರೆ.
ಕನ್ನಡಿಗ ರಾಘವೇಂದ್ರ 2013ರಿಂದ ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ದಯಾ ಹಾಗೂ ನುವಾನ್ ಕೂಡ ನೆರವಾಗುತ್ತಿದ್ದಾರೆ. ಈ ಮೂವರಿಂದಾಗಿ ವೇಗದ ಬೌಲರ್ಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತಿದೆ ಎಂಬುದಾಗಿ ವಿರಾಟ್ ಕೊಹ್ಲಿ ಲಂಕಾ ವಿರುದ್ಧದ ಪಂದ್ಯದ ಬಳಿಕ ಹೇಳಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಕೊಹ್ಲಿಯ ಅಭಿಪ್ರಾಯಕ್ಕೆ ಮತ್ತೊಬ್ಬ ಶತಕವೀರ ಶುಭಮನ್ ಗಿಲ್ ಕೂಡ ಧನಿಗೂಡಿಸಿದ್ದಾರೆ. ಲಂಕಾ ವೇಗಿಗಳನ್ನು ಎದುರಿಸಲು ಈ ಮೂವರು ನೆರವು ಕೊಟ್ಟರು ಎಂಬುದಾಗಿ ನುಡಿದಿದ್ದಾರೆ.
ಡಿ ರಾಘವೇಂದ್ರ, ನುವಾನ್ ಮತ್ತು ದಯಾ ಸತತವಾಗಿ 145 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುತ್ತಾರೆ. ಅವರ ಜತೆಗಿನ ಅಭ್ಯಾಸದ ಅವಧಿ ಹೆಚ್ಚು ಗಂಭಿರವಾಗಿರುತ್ತದೆ. ಅವರು ಪಂದ್ಯದ ಪೂರ್ವದಲ್ಲಿ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಅದರಿಂದ ನಮಗೆ ಸಹಾಯವಾಗಿದೆ ಎಂಬುದಾಗಿ ವಿರಾಟ್ ಕೊಹ್ಲಿ ಹೊಗಳಿದ್ದಾರೆ.
ರಾಘವೇಂದ್ರ ನೇತೃತ್ವದಲ್ಲಿ ನಾವು ವಿಶ್ವ ದರ್ಜೆಯ ಅಭ್ಯಾಸವನ್ನು ಮಾಡುತ್ತೇವೆ. ಹೀಗಾಗಿ ನಮ್ಮ ಸಾಧನೆಯ ಶ್ರೇಯಸ್ಸು ರಘು ಹಾಗೂ ಇತರರಿಗೆ ಸಲ್ಲುತ್ತದೆ ಎಂಬುದಾಗಿ ವಿರಾಟ್ ಮತ್ತು ಗಿಲ್ ಹೇಳಿದ್ದಾರೆ.
ರಾಘವೇಂದ್ರ ಅವರು ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಕೊಂಡ ಬಳಿಕ ತಂಡದ ಅಭ್ಯಾಸದ ವೈಖರಿಯೇ ಬದಲಾಗಿದೆ. ಹಿಂದೆಗಿಂತಲೂ ಹೆಚ್ಚು ಪ್ರಖರವಾಗಿ ಅಭ್ಯಾಸ ನಡೆಸುತ್ತಿದ್ದೇವೆ. ಶುಬ್ಮನ್ ಗಿಲ್ಗೂ ಇದು ಅನುಭವಕ್ಕೆ ಬಂದಿರಬಹುದು ಎಂದು ವಿರಾಟ್ ವಿಡಿಯೊದಲ್ಲಿ ಹೇಳಿದ್ದಾರೆ
ರಾಘವೇಂದ್ರ ಅವರು ಥ್ರೋ ಡೌನ್ ವಿಷಯದಲ್ಲಿ ಅತ್ಯಂತ ಅನುಭವಿಯಾಗಿದ್ದು, ಆಟಗಾರರ ಫೂಟ್ವರ್ಕ್ ಗಮನಿಸಿ ಚೆಂಡನ್ನು ಎಸೆಯುವ ಮೂಲಕ ಅವರಿಗೆ ವೇಗದ ಬೌಲರ್ಗಳನ್ನು ಎದುರಿಸುವ ತಂತ್ರವನ್ನು ಹೇಳಿಕೊಡುತ್ತಾರೆ. 145ರಿಂದ 155 ಕಿ. ಮೀ ವೇಗದಲ್ಲಿ ಥ್ರೋ ಮಾಡುವ ಅವರಿಂದ ಭಾರತದ ಬ್ಯಾಟರ್ಗಳು ಸಾಕಷ್ಟು ಲಾಭ ಪಡೆಯುತ್ತರೆ.
ಇದನ್ನೂ ಓದಿ | Virat kohli | ಜನವರಿ 15 ವಿರಾಟ್ ಕೊಹ್ಲಿ ದಿನವಾಗಲಿ; ಅಭಿಮಾನಿಗಳ ಈ ಆಗ್ರಹದ ಹಿನ್ನೆಲೆಯೇನು?