ಅಹಮದಾಬಾದ್: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ನಾಲ್ಕನೇ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಮೂರು ವರ್ಷಗಳ ಬಳಿಕ ಅವರು ಬಾರಿಸಿದ ಟೆಸ್ಟ್ ಶತಕ ಅದು. ಟೆಸ್ಟ್ ಮಾದರಿಯಲ್ಲಿ ಅದು 28ನೇ ಹಾಗೂ ಒಟ್ಟಾರೆ 75ನೇ ಅಂತಾರಾಷ್ಟ್ರೀಯ ಶತಕ. ಹೀಗಾಗಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಏತನ್ಮಧ್ಯೆ, ಆಟದ ನಡುವೆ ವಿರಾಟ್ ಕೊಹ್ಲಿ ಸಹ ಆಟಗಾರ ಕೆ. ಎಸ್ ಭರತ್ ಅವರನ್ನು ಗದರಿದ್ದು ನೆಟ್ಟಿಗರ ಕೋಪಕ್ಕೆ ಕಾರಣವಾಯಿತು.
ವಿರಾಟ್ ಕೊಹ್ಲಿ 88 ರನ್ ಬಾರಿಸಿ 28ನೇ ಶತಕಕ್ಕಾಗಿ ನಿಧಾನಗತಿಯಲ್ಲಿ ಆಡುತ್ತಿದ್ದರು. ಕೆ. ಎಸ್ ಭರತ್ ಕೂಡ ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡುತ್ತಿದ್ದರು. ಇನಿಂಗ್ಸ್ನ 109ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಸಿಂಗಲ್ ಒಂದನ್ನು ತೆಗೆಯಲು ಪ್ರಯತ್ನಿಸುತ್ತಾರೆ. ನಾನ್ ಸ್ಟ್ರೈಕ್ ಎಂಡ್ನಲ್ಲಿದ್ದ ಭರತ್ ಓಟ ಆರಂಭಿಸಿದರೂ ಬಳಿಕ ಏಕಾಏಕಿ ನಿಂತು ವಿರಾಟ್ ಕೊಹ್ಲಿಗೆ ಬರದಂತೆ ಸೂಚಿಸುತ್ತಾರೆ. ಅರ್ಧ ಕ್ರೀಸ್ನಷ್ಟು ದೂರ ಓಡಿದ್ದ ವಿರಾಟ್ ಏಕಾಏಕಿ ಕಕ್ಕಾಬಿಕ್ಕಿಯಾಗುತ್ತಾರೆ. ಅಲ್ಲದೇ ವಾಪಸ್ ಓಡಿ ಕ್ರೀಸ್ ಸೇರಿಕೊಳ್ಳುತ್ತಾರೆ.
ನೆಟ್ಟಿಗರೊಬ್ಬರ ಟ್ವೀಟ್ ಈ ರೀತಿ ಇದೆ
ಒಂದು ವೇಳೆ ಫೀಲ್ಡರ್ಗಳು ಬೇಗ ಚೆಂಡು ಹೆಕ್ಕಿ ವಾಪಸ್ ಕೊಟ್ಟಿದ್ದರೆ ವಿರಾಟ್ ಕೊಹ್ಲಿ ಔಟಾಗುವ ಸಾಧ್ಯತೆಗಳಿದ್ದವು. ಈ ಮೂಲಕ ಅವರಿಗೆ 28ನೇ ಟೆಸ್ಟ್ ಶತಕ ಬಾರಿಸುವ ಅವಕಾಶ ನಷ್ಟವಾಗುತ್ತಿತ್ತು. ಸಹಜವಾಗಿ ಕೋಪಗೊಂಡ ವಿರಾಟ್ ಕೊಹ್ಲಿ ದುರುಗುಟ್ಟಿ ನೋಡಿ ಗದರುತ್ತಾರೆ.
ಇದನ್ನೂ ಓದಿ : Virat Kohli : ಮೂರು ವರ್ಷಗಳ ಬಳಿಕ ಟೆಸ್ಟ್ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಕೊಹ್ಲಿಯ ಈ ವರ್ತನೆ ನೆಟ್ಟಿಗರಿಗೆ ಹಿಡಿಸಿಲ್ಲ. ಕೊಹ್ಲಿಯಂಥ ಹಿರಿಯ ಆಟಗಾರು ಭರತ್ ಅವರಂತ ಅನನುಭವಿಗಳಿಗೆ ಮಾರ್ಗದರ್ಶನ ನೀಡಬೇಕು. ಮೈದಾನದಲ್ಲೇ ಗದರುವುದು. ಕೆಕ್ಕರಿಸಿ ನೋಡುವುದು ಸರಿಯಲ್ಲ ಎಂದು ಹಲವು ಮಂದಿ ಬರೆದುಕೊಂಡಿದ್ದಾರೆ.