Site icon Vistara News

ಇಂಗ್ಲೆಂಡ್​ ವಿರುದ್ಧ ಬೌಲಿಂಗ್​ ನಡೆಸಲಿದ್ದಾರೆ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ಗಳು

Cricket World Cup

ಲಕ್ನೋ: ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ತಂಡದ ಮ್ಯಾನೇಜ್‌ಮೆಂಟ್, ವಿರಾಟ್ ಕೊಹ್ಲಿ9Virat Kohli), ಶುಭಮನ್​ ಗಿಲ್(Shubman Gill) ಅಥವಾ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರಿಗೆ ಇಂಗ್ಲೆಂಡ್(ENG vs IND)​ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ನೀಡುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಅವರು ಆಂಗ್ಲ ವಿರುದ್ಧ ಅರೆಕಾಲಿಕ ಬೌಲರ್​ ಆಗಿ ಕನಿಷ್ಠ 4 ರಿಂದ 5 ಓವರ್​ ಎಸೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಲಕ್ನೋದಲ್ಲಿರುವ ಭಾರತ ತಂಡ ಗುರುವಾರ ರಾತ್ರಿ ನಡೆಸಿದ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ವಿರಾಟ್ ಕೊಹ್ಲಿ, ಶುಭಮನ್​ ಗಿಲ್‌ ಹಾಗೂ ಸೂರ್ಯಕುಮಾರ್ ಅವರು ಸಂಪೂರ್ಣವಾಗಿ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಇದನ್ನು ಗಮನಿಸುವಾಗ ಈ ಮೂವರಲ್ಲಿ ಒಬ್ಬರು ಬೌಲಿಂಗ್​ ನಡೆಸುವುದು ಖಚಿತ ಎನ್ನಲಾಗಿದೆ. ಒಂದೊಮ್ಮೆ ಮೂರು ಆಟಗಾರರು ಕೂಡ ಒಂದೆರಡು ಓವರ್​ ಬೌಲಿಂಗ್​ ನಡೆಸಿದರೂ ಅಚ್ಚರಿಯಿಲ್ಲ. ಏಕೆಂದರೆ ಗಾಯಾಳು ಪಾಂಡ್ಯ ಅವರ ಅನುಪಸ್ಥಿತಿಯನ್ನು ಬ್ಯಾಲೆನ್ಸ್​ ಮಾಡಲು ಈ ತಂತ್ರವನ್ನು ತಂಡದ ಮ್ಯಾನೇಜ್‌ಮೆಂಟ್ ಕೈಗೊಳ್ಳಬಹುದು.

ಕೊಹ್ಲಿಗೆ ಮೊದಲ ಆದ್ಯತೆ

ಟೀಮ್​ ಇಂಡಿಯಾಕ್ಕೆ ಈಗ ಅಗತ್ಯವಿರುವುದು ಮಧ್ಯಮ ವೇಗಿಯ ನೆರವು. ವಿರಾಟ್​ ಕೊಹ್ಲಿ ಮಧ್ಯಮ ವೇಗಿ ಆಗಿರುವುದರಿಂದ ಇವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ. ಗಿಲ್​ ಮತ್ತು ಸೂರ್ಯ ಅವರು ಸ್ಪಿನ್​ ಬೌಲರ್​ಗಳಾಗಿದ್ದಾರೆ. ಶಮಿ, ಸಿರಾಜ್​ ಮತ್ತು ಬುಮ್ರಾ ತಂಡದಲ್ಲಿದ್ದರೂ ಹೆಚ್ಚುವರಿ ಬೌಲಿಂಗ್​ ನಿರ್ವಹಣೆಯನ್ನು ಕೊಹ್ಲಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ Virat Kohli: ಎಷ್ಟು ಬಾರಿ ವಿರಾಟ್​ ಕೊಹ್ಲಿ ‘ನರ್ವಸ್ 90’ಗೆ ವಿಕೆಟ್​ ಒಪ್ಪಿಸಿದ್ದಾರೆ?​

ವಿರಾಟ್​ ಕೊಹ್ಲಿ ಅವರು ಬೌಲಿಂಗ್​ ಅನುಭವವನ್ನು ಹೊಂದಿದ್ದಾರೆ. 2015ರ ವಿಶ್ವಕಪ್​ನಲ್ಲಿ ಆಸೀಸ್​ ವಿರುದ್ಧ ಮತ್ತು ಇದಕ್ಕೂ ಮುನ್ನ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬೌಲಿಂಗ್​ ನಡೆಡಿದ್ದರು. ಇಲ್ಲಿ ತಲಾ ಓವರ್ ಬೌಲಿಂಗ್​ ನಡೆಸಿ ವಿಕೆಟ್​ ಪಡೆಯದಿದ್ದರೂ ಉತ್ತಮ ರನ್​ ಕಂಟ್ರೋಲ್​ ಮಾಡಿದ್ದರು. ಅಲ್ಲದೆ ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಅವರ ಓವರ್​ ಕೂಡ ಕೊಹ್ಲಿಯೇ ಪೂರ್ಣಗೊಳಿಸಿದ್ದರು. ಏಕದಿನದಲ್ಲಿ ಕೊಹ್ಲಿ 4 ವಿಕೆಟ್​, ಟಿ20 ಮತ್ತು ಐಪಿಎಲ್​ನಲ್ಲಿಯೂ ತಲಾ 4 ವಿಕಟ್​ ಪಡೆದ ಸಾಧನೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಬೌಲಿಂಗ್​ ನಡೆಸುವುದು ಕಷ್ಟದ ವಿಷಯವಲ್ಲ.​

ಸಚಿನ್​ ದಾಖಲೆ ಮೇಲೆ ಕಣ್ಣು

ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಕೇವಲ 5 ರನ್​ಗಳ ಅಂತರದಿಂದ ಸಚಿನ್​ ತೆಂಡೂಲ್ಕರ್​ ಅವರ ಶತಕದ ದಾಖಲೆಯನ್ನು ಸರಿಗಟ್ಟುವ ಅವಕಾಶದಿಂದ ವಂಚಿತರಾದ ವಿರಾಟ್​ ಕೊಹ್ಲಿ ಅವರು ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಇದನ್ನು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯ ಕೊಹ್ಲಿ 48 ಏಕದಿನ ಶತಕ ಬಾರಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧ ಕೊಹ್ಲಿ ಶತಕ ಬಾರಿಸಿದರೆ ಸಚಿನ್​ ಅವರ ಸರ್ವಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.

ಬ್ಯಾಟಿಂಗ್ ಶೈಲಿ ಬದಲಿಸುವರೇ ಕೊಹ್ಲಿ?

ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸುವ ಇಚ್ಛೆ ಹೊಂದಿದ್ದಾರೆ ಎಂಬ ಸುಳಿವೊಂದು ಲಭಿಸಿದೆ. ಇದಕ್ಕೆ ಬಾಂಗ್ಲಾ ಕಿವೀಸ್​ ವಿರುದ್ಧದ ಪಂದ್ಯವೇ ಸಾಕ್ಷಿ. ಕೊಹ್ಲಿ ಈ ಹಿಂದಿನಂತೆ ಶಾಂತ ರೀತಿಯ ಬ್ಯಾಟಿಂಗ್​ ಬದಲು ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಇದು ಬಾಂಗ್ಲಾ ಮತ್ತು ಕಿವೀಸ್​ ಪಂದ್ಯದಲ್ಲಿ ಕಂಡು ಬಂದಿತ್ತು. ಬಿರುಸಿನ ಬ್ಯಾಟಿಂಗ್​ ನಡೆಸಲೆಂದೇ ಅವರು ನೆಟ್ಸ್​ನಲ್ಲಿ ಅಭ್ಯಾಸ ನಡೆಸುವಾಗ ಹೆಚ್ಚಾಗಿ ಸಿಕ್ಸರ್​ಗಳನ್ನು ಬಾರಿಸುವ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

Exit mobile version