ಗುವಾಹಟಿ : ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಶತಕ ಬಾರಿಸುವ ಮೂಲಕ ಹೊಸ ವರ್ಷದಲ್ಲಿ ಶುಭಾರಂಭ ಮಾಡಿದ್ದಾರೆ. ಈ ಶತಕ ಅವರ ಪಾಲಿನ 73ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಅದೇ ರೀತಿ ಏಕ ದಿನ ಮಾದರಿಯಲ್ಲಿ ಬಾರಿಸಿದ 45ನೇ ಶತಕವಾಗಿದೆ. ಈ ಶತಕದ ಮೂಲಕ ಅವರು ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ತವರು ನೆಲದಲ್ಲಿ ಬಾರಿಸಿದ್ದ 20ನೇ ಏಕ ದಿನ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿರಾಟ್ ಈ ಸಾಧನೆ ಮಾಡುವ ಮಧ್ಯೆ ಎರಡು ಬಾರಿ ಜೀವದಾನ ಪಡೆದುಕೊಂಡಿದ್ದರು. 52 ಹಾಗೂ 81 ರನ್ ಬಾರಿಸಿದ್ದ ವೇಳೆ ಲಂಕಾ ಫೀಲ್ಡರ್ಗಳು ವಿರಾಟ್ ಕೊಹ್ಲಿಯ ಎರಡು ಕ್ಯಾಚ್ಗಳನ್ನು ಕೈ ಚೆಲ್ಲಿದ್ದರು. ಹೀಗಾಗಿ ಅವರಿಗೆ ಶತಕದ ಸಾಧನೆ ಮಾಡಲು ಸಾಧ್ಯವಾಯಿತು. ಜೀವದಾನ ಪಡೆದ ಹೊರತಾಗಿಯೂ ವಿರಾಟ್ ಕೊಹ್ಲಿ ತನ್ನ ಆಟದ ಶೈಲಿಯನ್ನು ಬದಲಾಯಿಸಿರಲಿಲ್ಲ. ಹೊಡೆಬಡಿಯ ಬ್ಯಾಟಿಂಗ್ ಮೂಲಕ ರನ್ ಗಳಿಸಿದ್ದರು.
ಈ ಜೀವದಾನಗಳ ಕುರಿತು ಇನಿಂಗ್ಸ್ ಮುಗಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಜೀವದಾನ ಸಿಕ್ಕಿದನ್ನು ಎಲ್ಲ ದಿನಗಳಲ್ಲೂ ನಾನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ಕೆಲವೊಂದು ಬಾರಿ ಸಾಧನೆಯ ಹಿಂದೆ ಅದೃಷ್ಟವೂ ಇರುತ್ತದೆ. ಇಂಥ ಅವಕಾಶಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.