ಪಲ್ಲೆಕೆಲೆ: ಪಾಕಿಸ್ತಾನ ವಿರುದ್ಧ ಸಾಗುತ್ತಿರುವ ಏಷ್ಯಾಕಪ್ನ(Asia Cup 2023) ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಶಾಹೀನ್ ಅಫ್ರಿದಿ(Shaheen Afridi) ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆತ ತಕ್ಷಣ ಪಾಕಿಸ್ತಾನ ಮಾಜಿ ಆಟಗಾರ ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ‘ನೀವು ಇದನ್ನು ರೀಪ್ಲೆಯಲ್ಲಿ ನೋಡಿ, ಆದರೆ ನೀವು ಈಗ ಔಟ್’ ಎಂದು ಹೇಳುವ ಮೂಲಕ ವಾಕರ್ ಯೂನಿಸ್(Waqar Younis) ವ್ಯಂಗ್ಯವಾಡಿದ್ದಾರೆ.
ಮಳೆಯಿಂದ ಎರಡು ಬಾರಿ ಅಡಚಣೆಯಾಗಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸದ್ಯ ಭಾರತ ತಂಡ 4 ವಿಕೆಟ್ಕೆಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅಗ್ರ ಕ್ರಮಾಂಕದ ಆಟಗಾರರೆಲ್ಲ. ಪೆವಿಲಿಯನ್ ಸೇರಿಕೊಂಡಿದ್ದಾರೆ. ಟಾಸ್ ಗೆದ್ದ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಶಾಹೀನ್ ಅಫ್ರಿದಿ ಬೆಂಕಿ ಎಸೆತಗಳ ಮೂಲಕ ಕಾಡಲಾರಂಭಿಸಿದರು. ಇದೇ ವೇಳೆ ಮಳೆಯಿಂದ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತು. ಮಳೆ ನಿಂತು ಪಂದ್ಯ ಆರಂಭಗೊಂಡ ಮುಂದಿನ ಎಸೆತದಲ್ಲೇ ರೋಹಿತ್ ಕ್ಲೀನ್ ಬೌಲ್ಡ್ ಆದರು.
ರೋಹಿತ್ ವಿಕೆಟ್ ಕಿತ್ತ ಬೆನ್ನಲ್ಲೇ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್ಗೆ ಒತ್ತು ನೀಡಿದರು. ಬೌಂಡರಿ ಮೂಲಕವೇ ಅವರು ಕಾತೆ ತೆರೆದಾಗ ಭಾರತೀಯ ನಿರೀಕ್ಷೆಗಳು ಕೂಡ ಹೆಚ್ಚಾಯಿತು. ಆದರೆ ಶಾಹಿನ್ ಅಫ್ರಿದಿ ಮತ್ತೆ ಘಾತಕ ಸ್ಫೆಲ್ ನಡೆಸಿ ಕೊಹ್ಲಿ ವಿಕೆಟ್ ಬೇಟೆಯಾಡಿದರು. ಅವರು ಕೂಡ ರೋಹಿತ್ ಅವರಂತೆ ಕ್ಲೀನ್ ಬೌಲ್ಡ್ ಆದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದ ಪಾಕಿಸ್ತಾನದ ಮಾಜಿ ಆಟಗಾರ ವಾಕರ್ ಯೂನಿಸ್. ನೀವು ಇದನ್ನು ರೀಪ್ಲೆಯಲ್ಲಿ ನೋಡಿ, ಆದರೆ ವಿರಾಟ್ ನೀವು ಈಗ ಔಟ್” ಎಂದು ಹೇಳುವ ಮೂಲಕ ಧಿಮಾಕು ತೋರಿದ್ದಾರೆ.
ಹಿಂದೆ ಭಾರತ ಮತ್ತು ಪಾಕ್ ಎಂದರೆ ಇಲ್ಲಿ ಕಿತ್ತಾಟ, ವಾಗ್ವಾದ ಸರ್ವೆ ಸಾಮಾನ್ಯವಾಗಿತ್ತು. ಆದರೆ ಈಗ ಈ ಕಾಲ ಬದಲಾಗಿದೆ. ಉಭಯ ತಂಡಗಳ ಆಟಗಾರರು ಶಾಂತ ರೀತಿಯಲ್ಲಿ ಕ್ರಿಕೆಟ್ ಆಡುತ್ತಾರೆ. ಇಲ್ಲಿ ಯಾವುದೇ ದ್ವೇಷವೂ ಕಂಡು ಬರುವುದಿಲ್ಲ. ಆದರೆ ಮಾಜಿ ಆಟಗಾರ ವಾಕರ್ ಯೂನಿಸ್ ಮಾತ್ರ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ.
ನಾಲ್ಕನೇ ಬಾರಿ ಎಡಗೈ ವೇಗಿಗೆ ವಿಕೆಟ್ ಒಪ್ಪಿಸಿದ ಕೊಹ್ಲಿ
2021ರಿಂದ ಏಕದಿನದಲ್ಲಿ ವಿರಾಟ್ ಕೊಹ್ಲಿ ಅವರು ನಾಲ್ಕನೇ ಬಾರಿ ಎಡಗೈ ವೇಗಿಗೆ ವಿಕೆಟ್ ಒಪ್ಪಿಸಿದರು. ಒಟ್ಟು ಮೂರು ವರ್ಷಗಳ ಅವಧಿಯಲ್ಲಿ ಕೊಹ್ಲಿ ಎಡಗೈ ವೇಗಿಯಿಂದ 98 ಎಸೆತಗಳನ್ನು ಎದುರಿಸಿ 87 ರನ್ ಕಲೆಹಾಕಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬರ್ನ್ ಟಿ20 ವಿಶ್ವಕಪ್ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅವರಿಗೆ ಪಾಕಿಸ್ತಾನ ವಿರುದ್ಧ ಇದು ಚೊಚ್ಚಲ ಪಂದ್ಯವಾಗಿದೆ. ಉಭಯ ಆಟಗಾರರು ಇತರ ತಂಡದ ಪರ ಆಡಿದ್ದರೂ ಪಾಕಿಸ್ತಾನ ವಿರುದ್ಧ ಇದೇ ಮೊದಲ ಬಾರಿ ಕಣಕಿಳಿಯುತ್ತಿದ್ದಾರೆ.
ಇದನ್ನೂ ಓದಿ Asia Cup 2023: ಪಾಕ್ ವಿರುದ್ಧದ ಪಂದ್ಯಕ್ಕೆ ರಣತಂತ್ರ ರೂಪಿಸಿದ ರೋಹಿತ್ ಶರ್ಮ
ಉಭಯ ತಂಡಗಳ ಆಡುವ ಬಳಗ
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್(ವಿಕೆಟ್ ಕೀಪರ್).