Site icon Vistara News

Virat Kohli: ಪಂಜಾಬ್​ ವಿರುದ್ಧ ಅರ್ಧಶತಕ ಬಾರಿಸಿ ಕೊಹ್ಲಿ ನಿರ್ಮಿಸಿದ ದಾಖಲೆಗಳು ಹೀಗಿವೆ!

Virat Kohli

ಬೆಂಗಳೂರು: ಚೇಸಿಂಗ್​ ಮಾಸ್ಟರ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಅವರು ಸೋಮವಾರ ಚಿನ್ನಸ್ವಾಮಿಯಲ್ಲಿ ನಡೆದ ಐಪಿಎಲ್​ನ(IPL 2024) ಪಂಜಾಬ್(RCB vs PBKS)​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟಿ20ಯಲ್ಲಿ(Virat Kohli t20 records) ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಶೂನ್ಯಕ್ಕೆ ಔಟಾಗಬೇಕಿದ್ದ ಕೊಹ್ಲಿ ಅವರು ಬೇರ್​ಸ್ಟೋ ಅವರಿಂದ ಜೀವದಾನ ಪಡೆದು ಅಮೋಘ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಅವರು ನಿರ್ಮಿಸಿದ ದಾಖಲೆ ಪಟ್ಟಿ ಹೀಗಿದೆ.

ಧವನ್‌ ದಾಖಲೆ ಹಿಂದಿಕ್ಕಿದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್‌ನಲ್ಲಿ 51ನೇ ಅರ್ಧಶತಕ ಪೂರ್ತಿಗೊಳಿಸಿದರು. ಈ ಮೂಲಕ 50 ಫಿಫ್ಟಿ ಸಿಡಿಸಿರುವ ಶಿಖರ್‌ ಧವನ್‌ ಅವರ ದಾಖಲೆಯನ್ನು ಹಿಂದಿಕ್ಕಿದರು. ಅಚ್ಚರಿ ಎಂದರೆ ಧವನ್​ ದಾಖಲೆ ಮುರಿದದ್ದು ಕೂಡ ಅವರ ತಂಡದ ವಿರುದ್ಧ ಆಡುವ ಮೂಲಕವೇ. 61 ಅರ್ಧಶತಕ ಬಾರಿಸಿರುವ ಡೇವಿಡ್‌ ವಾರ್ನರ್‌ ಅಗ್ರಸ್ಥಾನದಲ್ಲಿದ್ದಾರೆ. ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗೆ ಅಗ್ರಸ್ಥಾನ.

ಟಿ20ಯಲ್ಲಿ 100ನೇ 50+ ಸ್ಕೋರ್‌


ಈ ಪಂದ್ಯದಲ್ಲಿ ಒಟ್ಟಾರೆ 77 ರನ್‌ ಸಿಡಿಸಿದ ಕೊಹ್ಲಿ ಟ20 ಕ್ರಿಕೆಟ್‌ನಲ್ಲಿ 100ನೇ 50+ ಸ್ಕೋರ್‌ ಬಾರಿಸಿದ ದಾಖಲೆ ಬರೆದರು. ಜತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ಈ ಸಾಧನೆಯನ್ನು 377 ಪಂದ್ಯಗಳಲ್ಲಿ ಪೂರ್ಣಗೊಳಿಸಿದರು. ವೆಸ್ಟ್ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್‌ ಗೇಲ್‌ 110, ಡೇವಿಡ್‌ ವಾರ್ನರ್ 109 ಬಾರಿ ಟಿ20 ಕ್ರಿಕೆಟ್‌ನಲ್ಲಿ 50+ ರನ್ ಗಳಿಸಿದ್ದಾರೆ. ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವಾರ್ನರ್​ ದಾಖಲೆ ಮುರಿಯಲು ಕೊಹ್ಲಿಗೆ ಇನ್ನು ಹತ್ತು 50+ ಸ್ಕೋರ್‌ ಅಗತ್ಯವಿದೆ. ಸದ್ಯ ಐಪಿಎಲ್​ ಆಡುತ್ತಿರುವ ವಾರ್ನರ್​ ಕೂಡ ಮುಂದಿನ ಪಂದ್ಯಗಳಲ್ಲಿ 50+ ರನ್ ಬಾರಿಸಿದರೆ ಆಗ ಕೊಹ್ಲಿಗೆ ಇನ್ನಷ್ಟು 50+ ಸ್ಕೋರ್​ನ ಅಗತ್ಯ ಬೀಳಬಹುದು. 81 ಬಾರಿ ಈ ಸಾಧನೆ ಮಾಡಿರುವ ರೋಹಿತ್‌ ಶರ್ಮಾ ಭಾರತೀಯರ ಆಟಗಾರರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Virat Kohli: ಮತ್ತೆ ಹಳೇ ಚಾಳಿ ಮುಂದುವರಿಸಿದ ಕೊಹ್ಲಿ; ಎದುರಾಳಿ ಆಟಗಾರನಿಗೆ ನಿಂದನೆ

ಚಿನ್ನಸ್ವಾಮಿಯಲ್ಲಿ 25ನೇ ಅರ್ಧಶತಕ


2008ರಿಂದ ಆರ್​ಸಿಬಿ ಏಕೈಕ ತಂಡದ ಪರ ಆಡುತ್ತಿರುವ ವಿರಾಟ್​ ಕೊಹ್ಲಿ ಅವರು ನಿನ್ನೆ ನಡೆದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ 25ನೇ ಅರ್ಧಶತಕ ಪೂರ್ತಿಗೊಳಿಸಿದರು. ಇದು ಕ್ರೀಡಾಂಗಣವೊಂದರಲ್ಲಿ ಆಟಗಾರ ಬಾರಿಸಿದ ಗರಿಷ್ಠ ಅರ್ಧಶತಕದ ದಾಖಲೆಯೂ ಹೌದು. ಡೇವಿಡ್​ ವಾರ್ನರ್​ ಅವರು ಹೈದರಾಬಾದ್‌ನಲ್ಲಿ 18, ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಚಿನ್ನಸ್ವಾಮಿಯಲ್ಲಿ 16, ರೋಹಿತ್‌ ಶರ್ಮಾ ಮುಂಬೈಯ ವಾಂಖೇಡೆಯಲ್ಲಿ 15 ಬಾರಿ ಈ ಸಾಧನೆ ಮಾಡಿದ್ದಾರೆ.

ಕ್ಯಾಚ್​ ದಾಖಲೆ


ಬ್ಯಾಟಿಂಗ್​ ಮಾತ್ರವಲ್ಲದೆ ಫೀಲ್ಡಿಂಗ್​ ವಿಭಾಗದಲ್ಲಿಯೂ ಕೊಹ್ಲಿ ದಾಖಲೆ ಬರೆದರು. ಪಂದ್ಯದಲ್ಲಿ 2 ಕ್ಯಾಚ್​ ಹಿಡಿಯುವ ಮೂಲಕ  ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ಭಾರತೀಯ ಆಟಗಾರ ಎನಿಸಿಕೊಂಡರು. ಟಿ20 ಕ್ರಿಕೆಟ್​ನಲ್ಲಿ 173 ನೇ ಕ್ಯಾಚ್ ಹಿಡಿದು ಸುರೇಶ್​ ರೈನಾ ದಾಖಲೆಯನ್ನು ಹಿಂದಿಕ್ಕಿದರು. ರೈನಾ 172 ಕ್ಯಾಚ್‌ಗಳನ್ನು ಪಡೆದಿದ್ದಾರೆ. ರೋಹಿತ್​ ಶರ್ಮ ಅವರು ಸದ್ಯ 167 ಕ್ಯಾಚ್ ಹಿಡಿದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 146 ಕ್ಯಾಚ್​ ಪಡೆದ ಮನೀಷ್​ ಪಾಂಡೆ ನಾಲ್ಕನೇ ಸ್ಥಾನ, 136 ಕ್ಯಾಚ್​ ಪಡೆದ ಸೂರ್ಯಕುಮಾರ್​ ಯಾದವ್​ 5ನೇ ಸ್ಥಾನದಲ್ಲಿದ್ದಾರೆ.

Exit mobile version