Site icon Vistara News

Virat Kohli: ಡ್ರೆಸ್ಸಿಂಗ್​ ರೂಮ್​ನಲ್ಲಿ ಬೇಸರದಿಂದ ಕುಳಿತ ಕೊಹ್ಲಿಯ ಫೋಟೊ ವೈರಲ್​

virat kohli dressing room

ಅಹಮದಾಬಾದ್​: ಏಕದಿನ ವಿಶ್ವಕಪ್(ICC World Cup 2023)​ ಗೆಲ್ಲುವ ಭಾರತದ 140 ಕೋಟಿ ಅಭಿಮಾನಿಗಳ ಕನಸನ್ನು ಛಿದ್ರಗೊಳಿಸಿದ ಆಸ್ಟ್ರೇಲಿಯಾ(India vs Australia Final) ದಾಖಲೆಯ 6ನೇ ವಿಶ್ವಕಪ್​ ಕಿರೀಟವನ್ನು ಮುಡಿಗೇರಿಸಿಕೊಂಡಿತು. 12 ವರ್ಷಗಳ ಬಳಿಕ ತವರಿನಲ್ಲಿ ಗೆದ್ದು, ಮೂರನೇ ವಿಶ್ವಕಪ್​ ಎತ್ತಿ ಹಿಡಿಯುವ ಭಾರತದ ಕನಸು ಭಗ್ನಗೊಂಡಿತು. ಸೋಲಿನ ಬೇಸರದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಡ್ರೆಸ್ಸಿಂಗ್​ ರೂಮ್​ನಲ್ಲಿ ತಲೆ ಕೆಳಗೆ ಹಾಕಿ ಕುಳಿತಿರುವ ಫೋಟೊ ವೈರಲ್ ಆಗಿದೆ.

ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ ಭಾರತ ತಂಡದ ಆಟಗಾರರೆಲ್ಲ ಫೈನಲ್​ ಪಂದ್ಯದಲ್ಲಿ ಆತ್ಮವಿಶ್ವಾಸ ಕಳೆದುಕೊಂಡವರಂತೆ ಆಡಿದ್ದು ಸೋಲಿಗೆ ಪ್ರಮುಖ ಕಾರಣ. ತಂಡ ಸೋಲು ಕಾಣುತ್ತಿದ್ದಂತೆ ಮೊಹಮ್ಮದ್​ ಸಿರಾಜ್​, ನಾಯಕ ರೋಹಿತ್​ ಶರ್ಮ ಸೇರಿ ಕೆಲ ಆಟಗಾರರು ಮೈದಾನದಲ್ಲೇ ಕಣ್ಣೀರು ಸುರಿಸುತ್ತಾ ಡ್ರಸಿಂಗ್​ ರೂಮ್​ಗೆ ತೆರಳಿದರು. ಈ ದೃಶ್ಯವನ್ನು ಕಂಡು ಮೋದಿ ಸ್ಟೇಡಿಯಂನಲ್ಲಿ ಒಂದು ಕ್ಷಣ ನೀರವ ಮೌನ ಆವರಿಸಿತ್ತು.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿಯೂ ಕೋಚ್​ ರಾಹುಲ್ ದ್ರಾವಿಡ್​ ಅವರು ತಂಡದ ಆಟಗಾರರು ಡ್ರೆಸ್ಸಿಂಗ್​ ರೋಮ್​ನಲ್ಲಿ ಬೇಸರದಿಂದ ಕುಳಿತಿರುವ ವಿಚಾರವನ್ನು ತಿಳಿಸಿದ್ದರು. ವಿರಾಟ್​ ಕೊಹ್ಲಿ ಅವರು ಬೇಸರದಿಂದ ಕುಳಿತಿರುವ ಫೋಟೊ ಎಲ್ಲಡೆ ವೈರಲ್​ ಆಗಿದೆ. ಕೊಹ್ಲಿಯ ಈ ಫೋಟೊ ಕಂಡ ಅಭಿಮಾನಿಗಳು ನೀವು ತಲೆ ತಗ್ಗಿಸುವ ಅಗತ್ಯವಿಲ್ಲ. ನಿಮ್ಮ ಪ್ರದರ್ಶನಕ್ಕೆಎ ನಾವು ತಲೆಬಾಗಬೇಕು. ನೀವು ಯಾವಾಗಲು ತಲೆ ಎತ್ತಿ ನಡೆಯಬೇಕು ಎಂದು ಕೊಹ್ಲಿಗೆ ಸಮಾಧಾನ ಹೇಳಿದ್ದಾರೆ.

ಇದನ್ನೂ ಓದಿ ICC World Cup 2023: ವಿರಾಟ್‌ ಕೊಹ್ಲಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿದ ಅನುಷ್ಕಾ ಶರ್ಮಾ

2019ರ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಂಡಾಗಲು ಕೊಹ್ಲಿ, ರೋಹಿತ್​ ಶರ್ಮ ಸೇರಿ ಕೆಲ ಆಟಗಾರರು ಡ್ರೆಸ್ಸಿಂಗ್​ ರೂಮ್​ನಲ್ಲಿ ಬೇಸರದಿಂದ ಕುಳಿತ್ತಿದ್ದ ಫೋಟೊಗಳು ವೈರಲ್​ ಆಗಿತ್ತು.

ತಬ್ಬಿಕೊಂಡು ಸಮಾಧಾನ ಮಾಡಿದ ಅನುಷ್ಕಾ

ದುಃಖದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಅವರ ಪತ್ನಿ ಅನುಷ್ಕಾ ಶರ್ಮಾ(Anushka Sharma) ಸಮಾಧಾನ ಮಾಡಿದ ಫೋಟೊ ವೈರಲ್ ಆಗಿದೆ. ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್‌ನನ್ನು ಅಪ್ಪಿಕೊಂಡು ಸಾಂತ್ವನ ಮಾಡುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಮತ್ತೊಂದೆಡೆ, ಆಸ್ಟ್ರೇಲಿಯಾ ವಿರುದ್ದ ಸೋಲಿನ ಹೊರತಾಗಿಯೂ ಭಾರತವು ಇಡೀ ಟೂರ್ನಿಯಲ್ಲಿ ಆಡಿದ ಆಟವನ್ನು ಇಡೀ ದೇಶವೇ ಶ್ಲಾಘಿಸುತ್ತಿದೆ(ICC World Cup 2023).

ಫೈನಲ್ ಪಂದ್ಯದಲ್ಲಿ ಸೋಲಿನಿಂದಾಗಿ ನಿರಾಸೆಗೊಂಡಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ಹೆಂಡತಿ ಇರುವ ಸ್ಟ್ಯಾಂಡ್‌ನತ್ತ ಹೋಗುತ್ತಾರೆ. ಆಗ ಅನುಷ್ಕಾ ಶರ್ಮಾ ಅವರು ವಿರಾಟ್‌ ಅವರನ್ನು ತಬ್ಬಿಕೊಂಡು ಸಮಧಾನಿಸಿದ್ದಾರೆ.

ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ವಿರಾಟ್​​ ಕೊಹ್ಲಿ

ವಿಶ್ವಕಪ್​ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ (Virat Kohli) ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಅವರು 11 ಪಂದ್ಯಗಳನ್ನು ಆಡಿ ಒಟ್ಟು 765 ರನ್​ ಬಾರಿಸಿ ಅತ್ಯಧಿಕ ರನ್​ಗಳಿಸಿದ ಆಟಗಾರ ಎನಿಸಿಕೊಂಡರು. ಅವರ ಈ ಸಾಧನೆಗೆ ಈ ಪ್ರಶಸ್ತಿ ಒಲಿದಿದೆ.

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ವಿರಾಟ ದರ್ಶನ ತೋರಿದ ಕೊಹ್ಲಿ ಟೂರ್ನಿಯ ಟಾಪ್‌ ಸ್ಕೋರರ್‌ ಆಗಿ ಹೊರಮೊಮ್ಮಿದ್ದಾರೆ. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಆಸೀಸ್​ ವಿರುದ್ಧದ ಮೊದಲ ಲೀಗ್​ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ 85 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫಘಾನಿಸ್ತಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ 55 ರನ್‌ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್‌ ಗಳಿಸಿದರು.

ನ್ಯೂಜಿಲ್ಯಾಂಡ್‌ ವಿರುದ್ಧ 95 ರನ್‌ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ ಗಳಿಸಿ ಸಚಿನ್​ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನೆದರ್ಲೆಂಡ್ಸ್‌ ವಿರುದ್ಧ 51 ರನ್‌ ಗಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್‌ ಗಳಿಸಿದ ಕೊಹ್ಲಿ, ಸಚಿನ್​ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 54 ರನ್​ ಬಾರಿಸಿದರು. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 765 ರನ್​ ಬಾರಿಸಿದರು.

Exit mobile version