Site icon Vistara News

Virat Kohli: ಸಚಿನ್ ದಾಖಲೆ ಮುರಿದು ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ

Virat Kohli is ecstatic after scoring his 48th century

ಪುಣೆ: ಗುರುವಾರ ನಡೆದ ಬಾಂಗ್ಲಾದೇಶ(India vs Bangladesh) ವಿರುದ್ಧದ ವಿಶ್ವಕಪ್​(ICC World Cup) ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ ವಿರಾಟ್​ ಕೊಹ್ಲಿ(Virat Kohli) ಅವರು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಇದೇ ವೇಳೆ ಅವರು ವಿಶ್ವ ದಾಖಲೆಯೊಂದನ್ನು ಕೂಡ ನಿರ್ಮಿಸಿ ಗಮನಸೆಳೆದಿದ್ದಾರೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಶನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 256 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ 41.3 ಓವರ್​​ಗಳಲ್ಲಿ ಮೂರು ವಿಕೆಟ್​ಗೆ 261 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್​ ವೇಳೆ ಅತ್ಯಮೋಘ ಬ್ಯಾಟಿಂಗ್​ ಪ್ರದರ್ಶಿಸಿದ ವಿರಾಟ್​ ಕೊಹ್ಲಿ 97 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ ಅಜೇಯ 103 ರನ್​ ಬಾರಿಸಿ ಶತಕ ದಾಖಲಿಸಿದರು. ಗೆಲುವಿಗೆ ಮೂರು ರನ್​ ಬೇಕಿದ್ದಾಗ ಕೊಹ್ಲಿ ಸಿಕ್ಸರ್​ ಬಾರಿಸಿ ತಂಡಕ್ಕೆ ಗೆಲುವು ಜತೆಗೆ ತಮ್ಮ ಶತಕವನ್ನೂ ಪೂರ್ತಿಗೊಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ ಬಾಳ್ವೆಯಲ್ಲಿ 48ನೇ ಶತಕ ಬಾರಿಸಿದರು.

ಇದನ್ನೂ ಓದಿ Ind vs Ban : ಸಂಘಟಿತ ಬೌಲಿಂಗ್​ ದಾಳಿ; ಭಾರತ ತಂಡಕ್ಕೆ 257 ರನ್ ಗೆಲುವಿನ​ ಗುರಿ

ಸಚಿನ್​ ದಾಖಲೆ ಪತನ

ಈ ಶತಕದೊಂದಿಗೆ ವಿರಾಟ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 26 ಸಾವಿರ ರನ್ ಪೂರೈಸಿದ್ದಾರೆ. ಅಲ್ಲದೆ ಅತಿ ವೇಗವಾಗಿ 26000 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್​ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಅವರು 601 ಇನಿಂಗ್ಸ್​ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಕೊಹ್ಲಿ ಕೇವಲ 577 ಇನಿಂಗ್ಸ್​ಗಳ ಮೂಲಕ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.

8 ವರ್ಷಗಳ ಬಳಿಕ ವಿಶ್ವಕಪ್​ನಲ್ಲಿ ಬೌಲಿಂಗ್​

ಇದೇ ಪಂದ್ಯದಲ್ಲಿ ವಿರಾಟ್​ ಅವರು ಬೌಲಿಂಗ್​ ಮಾಡಿ ಗಮನಸೆಳೆದರು. ಈ ಮೂಲಕ 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿದ ಸಾಧನೆ ಮಾಡಿದರು. ಹಾರ್ದಿಕ್​ ಪಾಂಡ್ಯ ಅವರು ಗಾಯಗೊಂಡ ಕಾರಣ ಅವರ ಓವರ್​ ಅನ್ನು ಪೂರ್ತಿಗೊಳಿಸುವ ಮೂಲಕ ಈ ಸಾಧನೆ ಮಾಡಿದರು.

2011ರ ವಿಶ್ವಕಪ್​ ಫೈನಲ್​ನಲ್ಲಿಯೂ ಬೌಲಿಂಗ್​

ವಿರಾಟ್​ ಕೊಹ್ಲಿ ಅವರು ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿ ಬೌಲಿಂಗ್​ ನಡೆಸಿದ್ದು 2011ರ ವಿಶ್ವಕಪ್​ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಕೊಹ್ಲಿ ಒಂದು ಓವರ್​ ಎಸೆದು 6 ರನ್​ ನೀಡಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿಯೂ ಒಂದು ಓವರ್​ ಎಸೆದಿದ್ದರು. ಇಲ್ಲಿಯೂ 6 ರನ್​ ಬಿಟ್ಟುಕೊಟ್ಟಿದ್ದರು. ಕೊನೆಯ ಬಾರಿ ವಿಶ್ವಕಪ್​ನಲ್ಲಿ ಕೊಹ್ಲಿ ಬೌಲಿಂಗ್​ ನಡೆಸಿದ್ದು 2015ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸೀಸ್​ ವಿರುದ್ಧ ಒಂದು ಓವರ್​ ಬೌಲಿಂಗ್​ ನಡೆಸಿ 7 ರನ್​ ಬಿಟ್ಟುಕೊಟ್ಟಿದ್ದರು. ಇದೀಗ 8 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ನಲ್ಲಿ ಬೌಲಿಂಗ್​ ನಡೆಸಿದ್ದಾರೆ. ಆದರೆ ಇಲ್ಲಿ ಮೂರು ಬೌಲ್​ ಮಾತ್ರ ಎಸೆದರು.

Exit mobile version