ಹೈದರಾಬಾದ್: ಈಗಾಗಲೇ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆ ಬರೆದಿದ್ದಾರೆ. ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲೂ ಅವರಿಗೆ ಹಲವು ದಾಖಲೆ ನಿರ್ಮಿಸುವ ಅವಕಾಶವಿದೆ.
ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧದ ಸರಣಿಯಲ್ಲಿ ಶತಕ ಬಾರಿಸಿದರೆ ವೀರೇಂದ್ರ ಸೆಹವಾಗ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರ ದಾಖಲೆ ಮುರಿಯುವ ಅವಕಾಶವಿದೆ. ಭಾರತ ತಂಡದ ಮಾಜಿ ಬ್ಯಾಟರ್ ವೀರೇಂದ್ರ ಸೆಹವಾಗ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ನ್ಯೂಜಿಲ್ಯಾಂಡ್ ವಿರುದ್ಧ 6 ಏಕದಿನ ಶತಕಗಳನ್ನು ಸಿಡಿಸಿ ದಾಖಲೆ ಹೊಂದಿದ್ದಾರೆ. ಒಂದೊಮ್ಮೆ ಈ ಸರಣಿಯಲ್ಲಿ ಕೊಹ್ಲಿ ಎರಡು ಶತಕ ಸಿಡಿಸಿದರೆ, ಈ ಇಬ್ಬರೂ ದಿಗ್ಗಜರ ದಾಖಲೆಯನ್ನು ಮುರಿಯಲಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧ 26 ಏಕದಿನ ಪಂದ್ಯಗಳನಾಡಿ 5 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಕಿವೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಲಂಕಾ ವಿರುದ್ಧದ ಬ್ಯಾಟಿಂಗ್ ಲಯವನ್ನು ಈ ಸರಣಿಯಲ್ಲಿಯೂ ಮುಂದುವರಿಸಿದರೆ ಕೊಹ್ಲಿ ಈ ದಾಖಲೆ ಮುರಿಯುವುದು ಖಚಿತ ಎನ್ನಲಡ್ಡಿಯಿಲ್ಲ.
ಸಚಿನ್ ದಾಖಲೆ ಮರಿಯುವ ಅವಕಾಶ
ಒಂದೊಮ್ಮೆ ಕೊಹ್ಲಿ ಈ ಸರಣಿಯಲ್ಲಿ ಒಂದು ಶತಕ ಬಾರಿಸಿದರೂ ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ದಾಖಲೆಯನ್ನು ಮುರಿಯುವ ಅವಕಾಶವೂ ಇದೆ. ನ್ಯೂಜಿಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್, ಜಯಸೂರ್ಯ ಮತ್ತು ಕೊಹ್ಲಿ 5 ಏಕದಿನ ಶತಕಗಳನ್ನು ಬಾರಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಕೊಹ್ಲಿ ಈ ಸರಣಿಯಲ್ಲಿ ಶತಕ ಸಿಡಿಸಿದರೆ ಕಿವೀಸ್ ವಿರುದ್ಧ 6 ಶತಕ ಪೂರೈಸುವ ಮೂಲಕ ಸಚಿನ್ ಮತ್ತು ಜಯಸೂರ್ಯ ದಾಖಲೆಯನ್ನು ಮುರಿಯಲಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು
ಆಟಗಾರ | ಪಂದ್ಯ | ಶತಕ |
ವೀರೇಂದ್ರ ಸೆಹವಾಗ್ | 23 | 6 |
ರಿಕಿ ಪಾಂಟಿಂಗ್ | 51 | 6 |
ಸನತ್ ಜಯಸೂರ್ಯ | 47 | 5 |
ವಿರಾಟ್ ಕೊಹ್ಲಿ | 26 | 5 |
ಸಚಿನ್ ತೆಂಡೂಲ್ಕರ್ | 42 | 5 |
ಇದನ್ನೂ ಓದಿ | Virat Kohli | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!