Site icon Vistara News

Virat Kohli: ಕ್ಯಾಚ್​ ಮೂಲಕ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Virat Kohli catches

ಬೆಂಗಳೂರು: ಸೋಮವಾರ ನಡೆದ ಐಪಿಎಲ್​ನ ಪಂಜಾಬ್​ ಕಿಂಗ್ಸ್​(Punjab Kings) ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಪಂದ್ಯದಲ್ಲಿ ಕ್ಯಾಚೊಂದನ್ನು ಪಡೆಯುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಆರಂಭಿಕ ಆಟಗಾರ ಜಾನಿ ಬೇರ್​ಸ್ಟೋ ಅವರ ಕ್ಯಾಚ್​ ಪಡೆಯುವ ಮೂಲಕ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 173 ನೇ ಕ್ಯಾಚ್ ಪೂರ್ಣಗೊಳಿಸಿದರು. ಇದರೊಂದಿಗೆ ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಆಟಗಾರರ ಪೈಕಿ ಮೊದಲ ಸ್ಥಾನಕ್ಕೇರಿದರು. ಈ ಹಿಂದೆ ಈ ದಾಖಲೆ ಮಾಜಿ ಆಟಗಾರ ಸುರೇಶ್​ ರೈನಾ ಹೆಸರಿನಲ್ಲಿತ್ತು. ರೈನಾ ಅವರು 172 ಕ್ಯಾಚ್‌ಗಳನ್ನು ಪಡೆದಿದ್ದರು. ಮುಂಬೈ ಇಂಡಿಯನ್ಸ್​ ಪರ ಆಡುವ ರೋಹಿತ್​ ಶರ್ಮ ಅವರು ಸದ್ಯ 167 ಕ್ಯಾಚ್ ಹಿಡಿದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 146 ಕ್ಯಾಚ್​ ಪಡೆದ ಮನೀಷ್​ ಪಾಂಡೆ ನಾಲ್ಕನೇ ಸ್ಥಾನ, 136 ಕ್ಯಾಚ್​ ಪಡೆದ ಸೂರ್ಯಕುಮಾರ್​ ಯಾದವ್​ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2024 Points Table: ಆರ್​ಸಿಬಿ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ದಾಖಲೆ ಸುರೇಶ್​ ರೈನಾ ಹೆಸರಿನಲ್ಲಿದೆ. 109 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೆರಡು ಕ್ಯಾಚ್​ಗಳ ಅಗತ್ಯವಿದೆ. ಸದ್ಯ ಕೊಹ್ಲಿ 108 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ಆವೃತ್ತಿಯಲ್ಲಿಯೇ ಕೊಹ್ಲಿ 2 ಕ್ಯಾಚ್​ ಹಿಡಿದು ರೈನಾ ಐಪಿಎಲ್​ ದಾಖಲೆಯನ್ನು ಕೂಡ ಮುರಿಯುವ ವಿಶ್ವಾಸದಲ್ಲಿದ್ದಾರೆ.

ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಕೊಹ್ಲಿ

 
ಚೇಸಿಂಗ್​ ವೇಳೆ ಆರ್​ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಫಾಫ್​ ಡು ಪ್ಲೆಸಿಸ್​ ಕೇವಲ 3 ರನ್​ಗೆ ಔಟಾಗುವುದರೊಂದಿಗೆ 26 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು. ನಂತರ ಬಂದ 10 ಕೋಟಿ ಮೌಲ್ಯದ ಆಟಗಾರ ಕ್ಯಾಮೆರೂನ್ ಗ್ರೀನ್ ಮತ್ತೊಂದು ಬಾರಿ ವೈಫಲ್ಯ ಕಂಡರಲ್ಲದೆ ಕೇವಲ 3 ರನ್​ಗೆ ಔಟಾದರು. 43 ರನ್​ಗಳಿಎಗ 2 ವಿಕೆಟ್​ ಕಳೆದುಕೊಂಡ ಬಳಿಕ ಆರ್​ಸಿಬಿಯ ರನ್​ ಗಳಿಕೆ ವೇಗ ಕುಸಿಯಿತು. ನಂತರ ಬಂದ ರಜತ್ ಪಾಟೀದಾರ್​ ಕೂಡ ಉತ್ತಮವಾಗಿ ಆಡಲಿಲ್ಲ. 18 ಎಸೆಗಳನ್ನು ಬಳಸಿಕೊಂಡು 18 ರನ್ ಬಾರಿಸಿ ಹೀನಾಯವಾಗಿ ಔಟ್​ ಆದರು. ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತೊಂದು ಬಾರಿ ವೈಫಲ್ಯ ಕಂಡು 3 ರನ್​ಗೆ ಪೆವಿಲಿಯನ್​ ಕಡೆಗೆ ನಡೆದರು. ಈ ವೇಳೆ ತಂಡಕ್ಕೆ ಆಸರೆಯಾದದ್ದು ವಿರಾಟ್​ ಕೊಹ್ಲಿ. ಆರಂಭಿಕರಾಗಿ ಆಡಲು ಇಳಿದ ವಿರಾಟ್​ ಕೊಹ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದರು. ನಿಧಾನಗತಿಯಲ್ಲಿ ಆಡಿದ ಅವರು 49 ಎಸೆತಕ್ಕೆ 77 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು.

ಪಂದ್ಯ ಗೆದ್ದ ಆರ್​ಸಿಬಿ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ 19.2 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ಕೊನೇ ಹಂತದಲ್ಲಿ ಆರ್​​ಸಿಬಿ ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕ್ಕೆ ಸಿಲುಕಿತು. ದಿನೇಶ್ ಕಾರ್ತಿಕ್​ 3 ಫೋರ್​ ಹಾಗೂ 2 ಸಿಕ್ಸರ್ ಸಮೇತ 10 ಎಸೆತದಲ್ಲಿ 28 ರನ್ ಹಾಗೂ ಮಹಿಪಾಲ್ ಲಾಮ್ರೋರ್​ 8 ಎಸೆತದಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ಸಮೇತ 17 ರನ್ ಬಾರಿಸಿ ಗೆಲುವು ತಂದುಕೊಟ್ಟರು.

Exit mobile version