Site icon Vistara News

Virat Kohli: ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ವಿರಾಟ್​​ ಕೊಹ್ಲಿ

PLAYER OF THE SERIES Virat Kohli

ಅಹಮದಾಬಾದ್​: ವಿಶ್ವಕಪ್​ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ (Virat Kohli) ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಅವರು 11 ಪಂದ್ಯಗಳನ್ನು ಆಡಿ ಒಟ್ಟು 765 ರನ್​ ಬಾರಿಸಿ ಅತ್ಯಧಿಕ ರನ್​ಗಳಿಸಿದ ಆಟಗಾರ ಎನಿಸಿಕೊಂಡರು. ಅವರ ಈ ಸಾಧನೆಗೆ ಈ ಪ್ರಶಸ್ತಿ ಒಲಿದಿದೆ.

ಈ ಬಾರಿ ವಿಶ್ವಕಪ್​ನಲ್ಲಿ ಕೊಹ್ಲಿ ಪ್ರದರ್ಶನ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ವಿರಾಟ ದರ್ಶನ ತೋರಿದ ಕೊಹ್ಲಿ ಟೂರ್ನಿಯ ಟಾಪ್‌ ಸ್ಕೋರರ್‌ ಆಗಿ ಹೊರಮೊಮ್ಮಿದ್ದಾರೆ. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಆಸೀಸ್​ ವಿರುದ್ಧದ ಮೊದಲ ಲೀಗ್​ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ 85 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫಘಾನಿಸ್ತಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ 55 ರನ್‌ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್‌ ಗಳಿಸಿದರು.

ನ್ಯೂಜಿಲ್ಯಾಂಡ್‌ ವಿರುದ್ಧ 95 ರನ್‌ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ ಗಳಿಸಿ ಸಚಿನ್​ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನೆದರ್ಲೆಂಡ್ಸ್‌ ವಿರುದ್ಧ 51 ರನ್‌ ಗಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್‌ ಗಳಿಸಿದ ಕೊಹ್ಲಿ, ಸಚಿನ್​ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 54 ರನ್​ ಬಾರಿಸಿದರು. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 765 ರನ್​ ಬಾರಿಸಿದರು.

ಇದನ್ನೂ ಓದಿ Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​ ತೆಂಡೂಲ್ಕರ್​


ಆಸೀಸ್​ ವಿರುದ್ಧ ಇಂದು ನಡೆದ ಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು 63 ಎಸೆತ ಎದುರಿಸಿ ಕೇವಲ 4 ಬೌಂಡರಿ ಬಾರಿಸಿ 54 ರನ್​ ಗಳಿಸಿದರು. ಒಂದೊಮ್ಮೆ ಇವರು ಈ ಪ್ರದರ್ಶನ ತೋರದೇ ಹೋಗಿದ್ದರೆ ಭಾರತತ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿರುತ್ತಿತ್ತು. 200 ರನ್​ ಗಟಿ ದಾಟುವುದು ಅಸಾಧ್ಯವಾಗಿರುತ್ತಿತ್ತು.

ಫೈನಲ್​ನಲ್ಲಿ ಆರು ವಿಕೆಟ್​ ಸೋಲು

ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್​ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್​​ ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

Exit mobile version