ದುಬೈ : ಹಾಂಕಾಂಕ್ ವಿರುದ್ಧದ ಪಂದ್ಯದಲ್ಲಿ ಭಾರತ ಪರ (Team India) ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಪ್ರೇಕ್ಷಕರಿಗೆ ಅದ್ಭುತ ಮನರಂಜನೆ ನೀಡಿದ್ದರು. ಕೇವಲ 26 ಎಸೆತಗಳಲ್ಲಿ ಅಜೇಯ ೬೮ ರನ್ ಬಾರಿಸಿದ್ದ ಅವರು ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೧೯೨ ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು. ಅದರಲ್ಲೂ ಅವರು ಹಾಂಕಾಂಗ್ ಬೌಲರ್ ಹರೂನ್ ಅರ್ಶದ್ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ೪ ಸಿಕ್ಸರ್‌ಗಳ ಸಮೇತ ೨೬ ರನ್ ಬಾರಿಸಿದ್ದರು. ಬ್ಯಾಟಿಂಗ್ ಮುಗಿಸಿ ಬರುತ್ತಿದ್ದ ಅವರಿಗೆ ಮತ್ತೊಂದು ತುದಿಯಲ್ಲಿ ಆಡಿದ್ದ ವಿರಾಟ್ ಕೊಹ್ಲಿ ತಲೆ ಬಾಗಿ ನಮಿಸಿದ್ದರು. ಅಲ್ಲದೆ, ಸೂರ್ಯಕುಮಾರ್‌ಗೆ ಜೋರಾಗಿ ಚಪ್ಪಾಳೆ ತಟ್ಟುವಂತೆ ಪ್ರೇಕಕ್ಷರಿಗೆ ಕೊಹ್ಲಿ ಸಂಜ್ಞೆ ಮಾಡಿದ್ದರು. ಕೊಹ್ಲಿಯ ಈ ಎಲ್ಲ ನಡೆಗೆ ಕ್ರಿಕೆಟ್ ಪ್ರೇಕ್ಷಕರಿಂದ ಅಭಿನಂದನೆಗಳ ಸುರಿಮಳೆ ಸುರಿದಿವೆ.
ಸೂರ್ಯಕುಮಾರ್ ಅವರನ್ನು ಅಷ್ಟೊಂದು ಅಭಿಮಾನದಿಂದ ಕಂಡ ವಿರಾಟ್ ಕೊಹ್ಲಿ ಎರಡು ವರ್ಷಗಳ ಹಿಂದೆ ಮೈದಾನದಲ್ಲೇ ಕಾಲು ಕೆದರಿ ಜಗಳವಾಡಿದ್ದರು. ಆ ವೇಳೆ ಅದು ದೊಡ್ಡ ಚರ್ಚೆಯ ವಿಷಯವಾಗಿತ್ತು. ಹೀಗಾಗಿ ಒಂದು ಸಮಯದಲ್ಲಿ ಸೂರ್ಯನನ್ನು ಕೆಕ್ಕರಿಸಿ ನೋಡಿದ್ದ ಕೊಹ್ಲಿ ಇದೀಗ ಬ್ಯಾಟಿಂಗ್ ಪ್ರದರ್ಶನಕ್ಕೆ ಮೆಚ್ಚಿ ತಲೆ ಬಾಗಿ ನಮಿಸಿದ್ದಾರೆ ಎನ್ನಲಾಗಿದೆ.
ದಿಟ್ಟಿಸಿ ನೋಡಿದ್ದ ಯಾಕೆ?
೨೦೨೦ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬಯಿ ಇಂಡಿಯನ್ಸ್ ತಂಡದ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದರು. ಆ ಪಂದ್ಯದಲ್ಲಿ ಸೂರ್ಯಕುಮಾರ್ ೪೩ ಎಸೆತಗಳಿಗೆ ೭೯ ರನ್ ಬಾರಿಸಿ, ಆರ್‌ಸಿಬಿ ಜಯವನ್ನು ಕಸಿದುಕೊಂಡಿದ್ದರು. ಸೂರ್ಯಕುಮಾರ್ ಬ್ಯಾಟ್ ಮಾಡಲು ಬರುವ ಮೊದಲು ವಿಜಯಲಕ್ಷ್ಮಿ ಆರ್‌ಸಿಬಿ ಪರ ವಾಲಿತ್ತು. ಆದರೆ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ವಿಜಯದ ಹಾರ ತಮ್ಮ ತಂಡದತ್ತ ಬರುವಂತೆ ಮಾಡಿದ್ದರು. ಏತನಧ್ಯೆ, ಇನಿಂಗ್ಸ್‌ನ ೧೩ ಓವರ್ ಎಸೆದ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಅವರ ಎಸೆತಕ್ಕೆ ಸೂರ್ಯಕುಮಾರ್ ಫೋರ್ ಬಾರಿಸಿದ್ದರು. ನಂತರದ ಎಸೆತವನ್ನು ಆವರು ಜೋರಾಗಿ ಬಾರಿಸಿದರೂ ವಿರಾಟ್ ಕೊಹ್ಲಿ ಫೀಲ್ಡ್ ಮಾಡಿದ್ದರು. ಅಲ್ಲಿಗೆ ಸುಮ್ಮನಾಗದ ಕೊಹ್ಲಿ, ಸೂರ್ಯಕುಮಾರ್ ಅವರ ಬಳಿಗೆ ತೆರಳಿ ಹೋಗಿ ದಿಟ್ಟಿಸಿ ನೋಡಿ ಅವರು ಚಂಚಲಗೊಳ್ಳುವಂತೆ ಮಾಡುವ ತಂತ್ರವನ್ನು ಬಳಸಿದರು. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಸೂರ್ಯ ಮುಂಬಯಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಸೂರ್ಯಕುಮಾರ್ ಆಗ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಹೀಗಾಗಿ ಹಿರಿಯ ಆಟಗಾರನಾಗಿರುವ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕಿದ್ದರು. ಆದರೆ ಸೂರ್ಯ, ಇವೆಲ್ಲವೂ ಮಾಮೂಲಿ ಎಂಬಂತೆ ನಡೆದುಕೊಂಡಿದ್ದರು. ಅಲ್ಲದೆ, ಆ ಬಳಿಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಮಾಡಿದಾಗಲೆಲ್ಲ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದರು. ಇದೀಗ ಸೂರ್ಯಕುಮಾರ್ ಹಾಗೂ ವಿರಾಟ್ ಜತೆಯಾಗಿ ಟೀಮ್ ಇಂಡಿಯಾಗೆ ಆಡುತ್ತಿದ್ದಾರೆ. ಈಗ ಕೊಹ್ಲಿ ಅವರು ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮೆಚ್ಚಿ ಮಾತನಾಡಿದ್ದರು.
ಸೂರ್ಯಕುಮಾರ್‌ಗೆ ಪ್ರಶಂಸೆ
ಹಾಂಕಾಂಗ್ ವಿರುದ್ಧ ಬ್ಯಾಟಿಂಗ್ ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್ ಬ್ಯಾಟಿಂಗ್ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ನೆರವು ಕೊಡುತ್ತಿರಲಿಲ್ಲ. ಆದರೆ, ಸೂರ್ಯಕುಮಾರ್ ಅವರ ಬ್ಯಾಟಿಂಗ್ ನೋಡುವಾಗ ರನ್ ಗಳಿಸುವ ಅವಕಾಶವನ್ನು ಎಷ್ಟು ಸುಲಭವಾಗಿಸಿದರು ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜತೆಯಾಟವನ್ನೂ ಸಂಭ್ರಮಿಸಿದ್ದಾರೆ. ಪಂದ್ಯದ ಬಳಿಕದ ಸುದ್ದಿಗೋಷ್ಠಿಯಲ್ಲಿ ತಮ್ಮ ಬ್ಯಾಟಿಂಗ್ ಬಗ್ಗೆ ಖುಷಿ ವ್ಯಕ್ತಪಡಿಸುವ ಜತೆಗೆ ವಿರಾಟ್ ಕೊಹ್ಲಿ ಅವರೊಂದಿಗಿನ ಜತೆಯಾಟವೂ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ | Asia Cup | ಕೊಹ್ಲಿ, ಸೂರ್ಯಕುಮಾರ್ ಅರ್ಧ ಶತಕ, 192 ರನ್ ಬಾರಿಸಿದ ಭಾರತ