ದುಬೈ: ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ್ಯಾಂಕಿಂಗ್ (Test Ranking) ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎಂಟು ಸ್ಥಾನಗಳನ್ನು ಬಡ್ತಿ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೇ ಪಂದ್ಯದಲ್ಲಿ ಅವರು 186 ರನ್ ಬಾರಿಸುವುದರೊಂದಿಗೆ ಅಂಕಗಳನ್ನು ಹೆಚ್ಚಿಸಿಕೊಂಡು ಎಂಟು ಆಟಗಾರರನ್ನು ಹಿಂದಿಕ್ಕಿ 13ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಹಲವಾರು ಸಮಯಗಳಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲಗೊಂಡಿದ್ದ ವಿರಾಟ್ ಕೊಹ್ಲಿ ಅಂತಿಮವಾಗಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ಮೂಲಕ ಅವರು ಟೆಸ್ಟ್ ಮಾದರಿಯಲ್ಲಿ ಸಂಪೂರ್ಣ ಚೈತನ್ಯ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಕೆಲವು ದಿನಗಳಿಂದ ಆಡುತ್ತಿಲ್ಲ. ಹೀಗಾಗಿ ಒಂದು ಸ್ಥಾನ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 10ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : IND VS AUS: ಪೂಜಾರ ಬೌಲಿಂಗ್ ಕಂಡು ಕೆಲಸ ಬಿಡಬೇಕೆ ಎಂದ ಆರ್. ಅಶ್ವಿನ್; ಪೂಜಾರ ನೀಡಿದ ಪ್ರತಿಕ್ರಿಯೆ ಏನು?
ಅಶ್ವಿನ್ಗೆ ಮೊದಲ ಸ್ಥಾನ
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಟ್ಟು 25 ವಿಕೆಟ್ಗಳನ್ನು ಕಬಳಿಸಿರುವ ಸ್ಪಿನ್ನರ್ ಆರ್ ಅಶ್ವಿನ್ ರ್ಯಾಂಕ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಒಟ್ಟು 869 ಅಂಕಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಜಸ್ಪ್ರಿತ್ ಬುಮ್ರಾ ಒಂದು ಸ್ಥಾನ ಹಿಂಬಡ್ತಿ ಪಡದುಕೊಂಡಿರುವ ಹೊರತಾಗಿಯೂ ಏಳನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.