ನಾಗ್ಪುರ: ಇಲ್ಲಿ ನಡೆಯುತ್ತಿರುವ ಆಸೀಸ್(IND VS AUS) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ(Virat Kohli) ಕೆಟ್ಟ ಹೊಡೆತಕ್ಕೆ ಬ್ಯಾಟ್ ಬೀಸಲು ಯತ್ನಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಲಂಕಾ ವಿರುದ್ಧದ ಏಕದಿನ ಸರಣಿಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶ ನೀಡಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಅವರು ಕೇವಲ 12ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿಯ ಆಟವನ್ನು ನೋಡಲು ಬಂದಿದ್ದ ಶಾಲಾ ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರು ಕೊಹ್ಲಿ ಔಟಾಗುತ್ತಿದ್ದಂತೆ ನಿರಾಸೆಗೊಂಡರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಪಿನ್ ದಾಳಿ ಎದುರಿಸಲು ಎಡವುತ್ತಿರುವ ಕೊಹ್ಲಿ
ವಿರಾಟ್ ಕೊಹ್ಲಿ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಪ್ರತಿ ಬಾರಿಯು ಎಡವುತ್ತಿರುವದನ್ನು ಇತಿಹಾಸವೇ ಹೇಳುತ್ತದೆ. ಕೊಹ್ಲಿ 2021 ರಿಂದ ಏಷ್ಯಾದ ನೆಲದಲ್ಲಿ 16 ಟೆಸ್ಟ್ ಇನಿಂಗ್ಸ್‌ಗಳಲ್ಲಿ 12 ಬಾರಿ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಆಫ್ ಸ್ಪಿನ್ನರ್‌ಗಳಿಗೆ 6 ಬಾರಿ, ಎಡಗೈ ಸ್ಪಿನ್ನರ್‌ಗಳ ವಿರುದ್ಧವೂ 6 ಬಾರಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಸ್ಪಿನ್ನರ್‌ಗಳ ವಿರುದ್ಧ ಸತತ ಔಟಾಗಿರುವುದು ವಿರಾಟ್ ಬ್ಯಾಟಿಂಗ್ ತಂತ್ರದಲ್ಲಿನ ದೋಷವನ್ನು ಎತ್ತಿ ತೋರಿಸುತ್ತಿದೆ. ಇದು ಕೇವಲ ಟಸ್ಟ್ ಕ್ರಿಕೆಟ್ನಲ್ಲಿ ಮಾತ್ರವಲ್ಲ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿಯೂ ಕೊಹ್ಲಿ ಸ್ಪಿನ್ಗೆ ಅತಿ ಹೆಚ್ಚು ಬಾರಿ ಔಟಾಗಿದ್ದಾರೆ ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಿಚೆಲ್ ಸ್ಯಾಂಟ್ನರ್ಗೆ ಎರಡು ಬಾರಿ ವಿಕೆಟ್ ಒಪ್ಪಿಸಿದ್ದು ಇದಕ್ಕೆ ತಾಜಾ ಉದಾಹರಣೆ.
ಬ್ಯಾಕ್‌ಫೂಟ್‌ನಲ್ಲಿ ಆಡದಂತೆ ಸಲಹೆ
ನಾಗ್ಪುರ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರು ಟಾಡ್ ಮರ್ಫಿ ಅವರ ಲೆಗ್ಸೈಡ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಇದೇ ವೇಳೆ ಕಾಮೆಂಟರಿ ಮಾಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗರು ಕೊಹ್ಲಿ ಸ್ಪಿನ್ ದಾಳಿಯನ್ನು ಎದುರಿಸಲು ಕಷ್ಟ ಪಡುತ್ತಾರೆ ಎಂದು ಹೇಳಿದ್ದಾರೆ. ನಿರಂತರವಾಗಿ ಸ್ಪಿನ್ನರ್‌ಗಳನ್ನು ಬ್ಯಾಕ್‌ಫೂಟ್‌ನಲ್ಲಿ ಆಡಲು ಪ್ರಯತ್ನಿಸುತ್ತಿರುವುದರಿಂದ ಅವರು ವಿಕೆಟ್ ಕೈ ಚೆಲ್ಲುತ್ತಿದ್ದಾರೆ ಎಂದು ಹೇಳಿದರು. ಒಂದು ವೇಳೆ ಕೊಹ್ಲಿ ಚೆಂಡನ್ನು ನೇರವಾಗಿ ಆಡಲು ಪ್ರಯತ್ನಿಸಿದರೆ ಅವರು ಸ್ಪಿನ್ ದಾಳಿಗೂ ಉತ್ತಮವಾಗಿ ಆಡಬಹುದು ಎಂದು ಸಲಹೆಯನ್ನೂ ನೀಡಿದ್ದಾರೆ. ಒಂದೊಮ್ಮೆ ಕೊಹ್ಲಿ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಬ್ಯಾಟಿಂಗ್ ದೋಷವನ್ನು ಪರಿಹರಿಸಿಕೊಳ್ಳಲಿದ್ದಾರಾ ಎಂಬುವುದನ್ನು ಮುಂದಿನ ಪಂದ್ಯದಲ್ಲಿ ಕಾದು ನೋಡಬೇಕಿದೆ.