ಮೊಹಾಲಿ : ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲ ರೆಕಾರ್ಡ್. ಬ್ಯಾಟಿಂಗ್ ಲೆಜೆಂಡ್ ಆಗಿರುವ ಅವರು ಎಂಥ ಪರಿಸ್ಥಿತಿಯಲ್ಲೂ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಏತನ್ಮಧ್ಯೆ, ಹಾಲಿ ಐಪಿಎಲ್ನಲ್ಲಿ ನಾಲ್ಕು ಅರ್ಧ ಶತಕಗಳೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು ಗುರುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರೀಗ ಐಪಿಎಲ್ ಇತಿಹಾಸದಲ್ಲಿ 100ಕ್ಕೂ ಅಧಿಕ ಬಾರಿ 30 ಹಾಗೂ ಅದಕ್ಕಿಂತ ಅಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸ್ಯಾಮ್ ಕರ್ರನ್ ಟಾಸ್ ಗೆದ್ದ ನಂತರ ಪ್ರವಾಸಿ ಆರ್ಸಿಬಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅಚ್ಚರಿಯೆಂದರೆ ಫಾಫ್ ಡು ಪ್ಲೆಸಿಸ್ ಪಕ್ಕೆಲುಬಿನ ಗಾಯದಿಂದ ಬಳಲುತ್ತಿರುವ ಕಾರಣ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಹಂಗಾಮಿ ನಾಯಕರಾಗಿದ್ದರು.
ಏತನ್ಮಧ್ಯೆ, ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 100 ಬಾರಿ ಮೂವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ವೇಳೆ ಐಪಿಎಲ್ನಲ್ಲಿ 600 ಬೌಂಡರಿಗಳನ್ನು ಸಿಡಿಸಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದರು. ಈ ಬಲಗೈ ಬ್ಯಾಟರ್ 556 ದಿನಗಳ ನಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ ಅಕ್ಟೋಬರ್ 11, 2021 ರಂದು ತಂಡದ ನಾಯಕರಾಗಿದ್ದರು.
ಇದನ್ನೂ ಓದಿ : HSBC INDIA : ಎಚ್‌ಎಸ್‌ಬಿಸಿ ಇಂಡಿಯಾ ಬ್ರಾಂಡ್ ರಾಯಭಾರಿಯಾಗಿ ವಿರಾಟ್ ಕೊಹ್ಲಿ ನೇಮಕ
ವಿರಾಟ್ ಕೊಹ್ಲಿ 100 ಬಾರಿ 30 ಪ್ಲಸ್ ರನ್ ಬಾರಿಸಲು 221 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಭಾರತದವರೇ ಆಗಿರುವ ಶಿಖರ್ ಧವನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 91 ಬಾರಿ 30 ಪ್ಲಸ್ ಸ್ಕೋರ್ ಬಾರಿಸಿದ್ದು ಅದಕ್ಕಾಗಿ 209 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದು 167 ಇನಿಂಗ್ಸ್ಗಳಲ್ಲಿ 90 ಬಾರಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ 85 ಬಾರಿ 30 ಪ್ಲಸ್ ರನ್ ಬಾರಿಸಿದ್ದು 227 ಇನಿಂಗ್ಸ್ಗಳಲ್ಲಿ ಆಡಿದ್ದಾರೆ. ಸುರೇಶ್ ರೈನಾ ಐದನೇ ಸ್ಥಾನದಲ್ಲಿದ್ದು 200 ಇನಿಂಗ್ಸ್ಗಳಲ್ಲಿ 77 ಬಾರಿ 30 ಪ್ಲಸ್ ರನ್ ಪೇರಿಸಿದ್ದಾರೆ.
ಒಂದು ಸಾವಿರ ಪಂದ್ಯದ ಹೊಸ್ತಿಲಲ್ಲಿ ಐಪಿಎಲ್
ವಿಶ್ವದ ಕ್ಯಾಶ್ ರಿಚ್ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಆರಂಭಗೊಂಡು 16ನೇ ಆವೃತ್ತಿ ನಡೆಯುತ್ತಿದೆ. 2008ರಲ್ಲಿ ಆರಂಭಗೊಂಡ ಈ ಟೂರ್ನಿ ಇದೀಗ 1000 ಪಂದ್ಯದ ಹೊಸ್ತಿಲಲ್ಲಿ ಬಂದು ನಿಂತಿದೆ. ಏಪ್ರಿಲ್ 30ರಂದು ನಡೆಯುವ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಐಪಿಎಲ್‌ನ 1000ನೇ ಪಂದ್ಯ ಆಗಲಿದೆ. ಈ ಪಂದ್ಯವನ್ನು ಸ್ಮರಣೀಯವಾಗಿಸಲು ಬಿಸಿಸಿಐ ಭರ್ಜರಿಯಾಗಿ ಸಿದ್ಧತೆ ಆರಂಭಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಐಪಿಎಲ್‌ನ ಉದ್ಘಾಟನಾ ಸಮಾರಂಭದ ರೀತಿಯಲ್ಲೇ ಈ ಪಂದ್ಯಕ್ಕೂ ಮುನ್ನ ಹಲವು ಮನರಂಜನಾ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಉದ್ಘಾಟನಾ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆದಿತ್ತು. ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 222 ರನ್ ರಾಶಿ ಹಾಕಿತ್ತು. ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಆರ್ಸಿಬಿ ಕೇವಲ 82 ರನ್ಗೆ ಆಲೌಟ್ ಆಗಿ 140 ರನ್ಗಳ ಅಂತರದ ಹೀನಾಯ ಸೋಲು ಕಂಡಿತ್ತು.