ಮುಂಬಯಿ : ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗುವುದಿಲ್ಲ (BCCI President) ಎಂಬುದು ಗುರುವಾರ ಬಹುತೇಕ ಖಚಿತಗೊಂಡಿದೆ. ಕೋಲ್ಕೊತಾದಲ್ಲಿ ಗುರುವಾರ ಹೇಳಿಕೆ ನೀಡಿದ ಮಾಜಿ ಆಟಗಾರ, ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ಬದಲಾಗಿ ದೊಡ್ಡ ಹೆಜ್ಜೆಯೊಂದನ್ನು ಇಡುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಈ ಸುದ್ದಿಯನ್ನು ಅತ್ಯಂತ ಖುಷಿಯಿಂದ ಸ್ವೀಕರಿಸಿದ್ದು ವಿರಾಟ್ ಕೊಹ್ಲಿಯ ಕಟ್ಟರ್ ಅಭಿಮಾನಿಗಳು. ಕೊಹ್ಲಿಯ ನಾಯಕತ್ವ ಕಿತ್ತು ಅವರಿಗೆ ಮಾನಸಿಕ ಕಿರುಕುಳ ಕೊಟ್ಟಿರುವ ಗಂಗೂಲಿಗೆ ಕರ್ಮ ಫಲ ತಟ್ಟಿದೆ ಎಂಬುದಾಗಿ ಟ್ರೋಲ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಗೆ ಭಾರತ ಏಕ ದಿನ ತಂಡದ ನಾಯಕರಾಗಿ ಉಳಿಯುವ ಮನಸ್ಸಿತ್ತು. ಆದರೆ, ಗಂಗೂಲಿ ಅದನ್ನು ಒತ್ತಾಯಪೂರ್ವಕವಾಗಿ ವಾಪಸ್ ಪಡೆದುಕೊಂಡರು. ಅವರಿಗೆ ಅದರ ಫಲ ತಟ್ಟಿದ್ದು, ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗುವ ಅವರ ಉತ್ಸಾಹಕ್ಕೆ ಭಂಗವಾಗಿದೆ ಎಂದು ಶೌರ್ಯ ಎಂಬುವರು ಟ್ವೀಟ್ ಮಾಡಿದ್ದಾರೆ.
ರಿತಿಕ್ ಎಂಬುವರು, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಗಂಗೂಲಿ ಇಳಿಸಿದ ರೀತಿಯಲ್ಲೇ ಅವರನ್ನೂ ಅಧ್ಯಕ್ಷ ಸ್ಥಾನದಿಂದ ಇಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ರಿತೇಶ್ ಎಂಬುವರು “ವಿರಾಟ್ ಕೊಹ್ಲಿಯನ್ನು ಸೌರವ್ ಗಂಗೂಲಿ ಕೆಟ್ಟದಾಗಿ ನಡೆಸಿಕೊಂಡರು. ಅಷ್ಟೇ ಕೆಟ್ಟದಾಗಿ ಗಂಗೂಲಿಯನ್ನು ಬಿಸಿಸಿಐ ನಡೆಸಿಕೊಂಡಿದೆ. ನಾನು ಇಬ್ಬರ ಅಭಿಮಾನಿ,” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | BCCI President | ಬಿಸಿಸಿಐ ಅಧ್ಯಕ್ಷ ಗಾದಿ ತೊರೆದ ಬಗ್ಗೆ ಮೌನ ಮುರಿದ ಸೌರವ್ ಗಂಗೂಲಿ