ಢಾಕಾ : ಪ್ರವಾಸಿ ಭಾರತ ಹಾಗೂ ಬಾಂಗ್ಲಾದೇಶ (INDvsBAN) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 14ರಂದು ಆರಂಭವಾಗಲಿದೆ. ಏಕ ದಿನ ಸರಣಿಯನ್ನು ಸೋತಿರುವ ಭಾರತ ತಂಡಕ್ಕೆ ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಗುರಿಯಿದೆ. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೇರುವುದು ಕೂಡ ಈ ಸರಣಿಯ ಅಜೆಂಡಾಗಳಲ್ಲಿ ಒಂದು. ಸರಣಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿರುವ ಕೆ. ಎಲ್ ರಾಹುಲ್ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಅದರಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟ ಪತ್ರಕರ್ತನಿಗೆ ನಾಯಕ ರಾಹುಲ್ ತಿರುಗೇಟು ಕೊಟ್ಟ ಪ್ರಸಂಗ ನಡೆಯಿತು.
ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಆದರೆ, ಹಾಲಿ ಋತುವಿನ ಕೆಂಪು ಚೆಂಡಿನ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದಾಗ್ಯೂ ಅವರು ಟಿ20 ಶತಕ ಹಾಗೂ ಏಕ ದಿನ ಮಾದರಿಯಲ್ಲಿ ಶತಕ ಬಾರಿಸಿದ್ದಾರೆ. ಟೆಸ್ಟ್ ತಂಡದಲ್ಲಿ ಅವರ ಕಳಪೆ ಪ್ರದರ್ಶನ ಮುಂದುವರಿಯಬಹುದೇ ಎಂದು ಪತ್ರಕರ್ತ ರಾಹುಲ್ ಅವರಿಗೆ ಪ್ರಶ್ನೆ ಕೇಳಿದ್ದಾನೆ.
ಇದಕ್ಕೆ ತಿರುಗೇಟು ಕೊಟ್ಟ ಕೆ. ಎಲ್. ರಾಹುಲ್, ನೀವು ಇಂಥದ್ದೊಂದು ಹೇಳಿಕೆಯನ್ನು ನೀಡುವುದಕ್ಕೆ ಮೂಲಕ ಎಲ್ಲಿದೆ. ನಮ್ಮ ತಂಡ ಕಳೆದ ವರ್ಷದ ಅಷ್ಟೊಂದು ಟೆಸ್ಟ್ ಪಂದ್ಯಗಳನ್ನೇ ಆಡಿಲ್ಲ. ಹೀಗಿರುವಾಗ ವಿರಾಟ್ ಕಳಪೆ ಫಾರ್ಮ್ನಲ್ಲಿ ಇದ್ದಾರೆ ಎಂದು ಹೇಳುವುದಕ್ಕೆ ಹೇಗೆ ಸಾಧ್ಯ? ಅವರು ಉತ್ತಮ ಫಾರ್ಮ್ನಲ್ಲಿ ಇದ್ದಾರೆ. ಟಿ20 ಶತಕ ಬಾರಿಸಿದ್ದಾರೆ. ಏಕ ದಿನದಲ್ಲಿ ಪ್ರಭಾವ ಬೀರಿದ್ದಾರೆ. ಹೀಗಾಗಿ ಟೆಸ್ಟ್ ಸರಣಿಯಲ್ಲೂ ಉತ್ತಮವಾಗಿ ಆಡಲಿದ್ದಾರೆ ಎಂಬುದಾಗಿ ರಾಹುಲ್ ಹೇಳಿದ್ದಾರೆ.
”ವಿರಾಟ್ ಕೊಹ್ಲಿ ಅನುಭವಿ ಆಟಗಾರ. ತಂಡದ ಕಡೆಗಿನ ಅವರ ಮನಸ್ಥಿತಿ ಹಾಗೂ ಪ್ರೀತಿ ಸದಾ ಒಂದೇ ರೀತಿ ಇರುತ್ತದೆ. ಅವರ ಬದ್ಧತೆ ತಂಡಕ್ಕೆ ಉತ್ತಮವಾದುದ್ದನ್ನೇ ನೀಡಿದೆ. ನೀವು ಅವರ ಫಾರ್ಮ್ ಬಗ್ಗೆ ಪ್ರಶ್ನೆ ಮಾಡಲೇಬಾರದು. ಅವರು ಶ್ರೇಷ್ಠ ಆಟಗಾರ ಹಾಗೂ ರನ್ ಗಳಿಸುವುದಕ್ಕೆ ಅವರ ಬಳಿ ಸಾಕಷ್ಟು ಅಸ್ತ್ರಗಳಿವೆ,” ಎಂಬುದಾಗಿ ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ | Team India | ಕೆ ಎಲ್ ರಾಹುಲ್ ಬೆಂಬಲಕ್ಕೆ ನಿಂತ ಎಲ್‌ಎಸ್‌ಜಿ ಕೋಚ್, ಗರಿಷ್ಠ ರೇಟಿಂಗ್ಸ್ ಕೊಡುವೆ ಎಂದರು