ದುಬೈ : ವಿರಾಟ್ ಕೊಹ್ಲಿ (ಅಜೇಯ ೧೨೨ ರನ್, ೬೧ ಎಸೆತ, ೧೨ ಫೋರ್, ೬ ಸಿಕ್ಸರ್) ಸಿಡಿಲಬ್ಬರದ ಶತಕ ಹಾಗೂ ಕೆ.ಎಲ್ ರಾಹುಲ್ ( ೬೨) ಅವರ ಅಮೋಘ ಅರ್ಧ ಶತಕದ ನೆರವು ಪಡೆದ ಭಾರತ ತಂಡ, ಎದುರಾಳಿ ಅಫಘಾನಿಸ್ತಾನಕ್ಕೆ ೨೧೩ ರನ್‌ಗಳ ಗೆಲುವಿನ ಗುರಿಯೊಡ್ಡಿದೆ. ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಕೆ. ಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದು, ಟಾಸ್ ಸೋತ ಭಾರತ ತಂಡ ಬ್ಯಾಟಿಂಗ್‌ಗೆ ಆಹ್ವಾನ ಪಡೆದು, ನಿಗದಿತ ೨೦ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೨೧೨ ರನ್ ಬಾರಿಸಿತು. ಈ ಶತಕದೊಂದಿಗೆ ವಿರಾಟ್ ಕೊಹ್ಲಿ ತಮ್ಮ ಟೀಕಾಕಾರರಿಗೆ ಸ್ಪಷ್ಟ ಪ್ರತ್ಯುತ್ತರ ಕೊಟ್ಟರು. ಕೊಹ್ಲಿಗೆ ಇದು ಮೊಟ್ಟ ಮೊದಲ ಟಿ೨೦ ಶತಕವಾಗಿದೆ. ಅವರೀಗ ಭಾರತ ಪರ ಟಿ೨೦ ಶತಕ ಬಾರಿಸಿದ ರೋಹಿತ್ ಶರ್ಮ, ಸುರೇಶ್ ರೈನಾ, ಕೆ. ಎಲ್. ರಾಹುಲ್ ಪಟ್ಟಿಗೆ ಸೇರಿಕೊಂಡರು.
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರಾಹುಲ್ ಹಾಗೂ ವಿರಾಟ್ ಕೊಹ್ಲಿಯ ಅಮೋಘ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಈ ಜೋಡಿ ೫.೫ ಓವರ್‌ಗಳಲ್ಲಿ ೫೦ ರನ್‌ಗಳನ್ನು ಪೇರಿಸಿತು. ಅದೇ ಲಯದಲ್ಲಿ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಅವರು ೧೧.೨ ಓವರ್‌ಗಳಲ್ಲಿ ೧೦೦ ರನ್ ಬಾರಿಸಿದರು. ಏತನ್ಮಧ್ಯೆ, ೩೨ ಎಸೆತಗಳಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಪೂರೈಸಿದರು. ಅಂತೆಯೇ ೫೩ ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಅವರು ೭೧ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ೧೦೧೯ ದಿನಗಳ ಬಳಿಕ ವೈಯಕ್ತಿಕ ಮೂರಂಕಿ ಮೊತ್ತ ದಾಟಿದರು. ೨೦೧೯ರ ನವೆಂಬರ್ ೨೩ ರಂದು ಅವರು ಕೊನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು.
ಆರಂಭಿಕರಾಗಿ ಕಣಕ್ಕಿಳಿದ ಅವರು ಸತತವಾಗಿ ಬ್ಯಾಟ್ ಬೀಸಿ ಅಜೇಯರಾಗಿ ಉಳಿದು ೧೨೨ ರನ್ ಬಾರಿಸಿದರು. ಕೊಹ್ಲಿಗೆ ಉತ್ತಮ ಜತೆಯಾಟ ನೀಡಿದ ಕೆ. ಎಲ್ ರಾಹುಲ್ ೪೧ ಎಸೆತಗಳಲ್ಲಿ ೬೨ ರನ್ ಬಾರಿಸಿ ಫಾರ್ಮ್ ಕಂಡುಕೊಂಡರು. ಸೂರ್ಯಕುಮಾರ್ ಯಾದವ್ ೬ ರನ್ ಗಳಿಸಿ ಔಟಾದರೆ, ರಿಷಭ್ ಪಂತ್ ೧೬ ಎಸೆಗಳಿಗೆ ೨೦ ರನ್ ಗಳಿಸಿದರು.
ಸ್ಕೋರ್ ವಿವರ
ಭಾರತ : ೨೦ ಓವರ್‌ಗಳಲ್ಲಿ ೨ ವಿಕೆಟ್‌ಗೆ ೨೧೨ (ವಿರಾಟ್ ಕೊಹ್ಲಿ ೧೨೨*, ಕೆ. ಎಲ್ ರಾಹುಲ್ ೬೨, ಫರೀದ್ ಅಹಮದ್ ೫೭ಕ್ಕೆ೨).