ಮುಂಬಯಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli ) ಅವರ ಟಿ೨೦ ಕ್ರಿಕೆಟ್ ಅಭಿಯಾನ ಕೊನೆಗೊಂಡಿತೇ? ಹೀಗೊಂದು ಪ್ರಶ್ನೆ ಹುಟ್ಟುಹಾಕಿದ ಬಿಸಿಸಿಐ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು.
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಶಿಖರ್ ಧವನ್‌ಗೆ ನಾಯಕತ್ವ ವಹಿಸಲಾಗಿದ್ದು, ರವೀಂದ್ರ ಜಡೇಜಾಗೆ ಉಪನಾಯಕನ ಪಟ್ಟ ನೀಡಲಾಗಿದೆ. ಕಾಯಂ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ರೋಹಿತ್, ಪಂತ್ ಹಾಗೂ ಪಾಂಡ್ಯ ವೆಸ್ಟ್ ಇಂಡೀಸ್‌ಗೆ ಪ್ರವಾಸ ಮಾಡಲಿದ್ದು, ಟಿ೨೦ಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದರೆ, ವಿರಾಟ್ ಕೊಹ್ಲಿಯ ಸೇರ್ಪಡೆ ಇನ್ನೂ ಅನಿಶ್ಚಿತ. ಇಂಗ್ಲೆಂಡ್ ವಿರುದ್ಧದ ಟಿ೨೦ ಹಾಗೂ ಏಕದಿನ ಸರಣಿಯಲ್ಲಿ ಅವರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ತಂಡದಲ್ಲಿ ಸ್ಥಾನ ನೀಡುವುದು ಬಿಸಿಸಿಐ ಉದ್ದೇಶ ಎನ್ನಲಾಗಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಏನಾದರೂ ವೈಫಲ್ಯ ಕಂಡರೆ ವಿಂಡೀಸ್ ವಿರುದ್ಧದ ೫ ಪಂದ್ಯಗಳ ಸರಣಿಯಲ್ಲಿ ಅವಕಾಶ ಗಿಟ್ಟಿಸುವುದು ಕಷ್ಟ. ಹೀಗಾದರೆ ಅವರು ಮುಂದಿನ ಟಿ೨೦ ವಿಶ್ವ ಕಪ್ ತಂಡದಲ್ಲೂ ಸ್ಥಾನ ಪಡೆಯಲಾರರು.
ಇಂಗ್ಲೆಂಡ್ ಸರಣಿ ನಿರ್ಣಾಯಕ
ಟಿ೨೦ ಆಡಲಿರುವ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಇಂಗ್ಲೆಂಡ್ ಹಾಗೂ ವಿಂಡೀಸ್ ಸರಣಿಯಲ್ಲಿನ ಪ್ರದರ್ಶನದ ಆಧಾರದಲ್ಲಿ ತಂಡ ರಚಿಸುವುದು ಬಿಸಿಸಿಐ ಯೋಜನೆ. ಹೀಗಾಗಿ ವಿಂಡೀಸ್ ಪ್ರವಾಸದಲ್ಲಿನ ಟಿ೨೦ ಸರಣಿಗೆ ಇನ್ನೂ ತಂಡ ಪ್ರಕಟಿಸಿಲ್ಲ. ಇಂಗ್ಲೆಂಡ್ ವಿರುದ್ಧದ ೩ ಪಂದ್ಯಗಳ ಸರಣಿ ಮುಗಿದ ಬಳಿಕ ತಂಡ ಪ್ರಕಟವಾಗಲಿದೆ. ಹೀಗಾಗಿ ಬಿಸಿಸಿಐ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಸರಣಿಗೆ ಅವಕಾಶ ನೀಡಿದ್ದು, ಒಂದು ವೇಳೆ ಯಶಸ್ಸು ಗಿಟ್ಟಿಸಿದರೆ ವಿಂಡೀಸ್ ಸರಣಿಗೆ ಸೇರಿಸಿಕೊಳ್ಳಲಿದ್ದಾರೆ. ಅಲ್ಲೂ ಬ್ಯಾಟಿಂಗ್ ಪ್ರಭಾವ ತೋರಿಸಿದರೆ ಮಾತ್ರ ಟಿ೨೦ ವಿಶ್ವ ಕಪ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ.
ಮೂರು ಮಾದರಿಯಲ್ಲೂ ವಿರಾಟ್ ಕೊಹ್ಲಿ ಭರವಸೆಯ ಪ್ರದರ್ಶನ ನೀಡುತ್ತಿಲ್ಲ. ಜತೆಗೆ ಟಿ೨೦ ಸರಣಿಯಿಂದ ಅವರು ಪದೇ ಪದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿಗೆ ಕೊಹ್ಲಿ ನಿರ್ಧಾರ ಸೂಕ್ತ ಎನಿಸುತ್ತಿಲ್ಲ. ಹೀಗಾಗಿ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲು ಬಿಸಿಸಿಐ ನಿರ್ಧರಿಸಿದೆ.
“ಹಿರಿಯ ಆಟಗಾರರೆಲ್ಲರೂ ಬಿಸಿಸಿಐನ ಎ ಗ್ರೇಡ್‌ನ ಗುತ್ತಿಗೆಯನ್ನು ಪಡೆದುಕೊಂಡವರು. ಆದಾಗ್ಯೂ ಅವರು ಪ್ರತಿ ಎರಡು ಸರಣಿಗೊಂದು ಬಾರಿ ಒತ್ತಡ ನಿರ್ವಹಣೆ ಉದ್ದೇಶದಿಂದ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಗೆ ಅವರ ಪೂರ್ಣ ಪ್ರಮಾಣದ ಸೇವೆ ದೊರೆಯುತ್ತಿಲ್ಲ. ಜತೆಗೆ ಈ ಎಲ್ಲ ಆಟಗಾರರ ಪ್ರದರ್ಶನದ ಗುಣಮಟ್ಟವನ್ನೂ ಪರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ,ʼʼ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸೀನಿಯರ್‌ಗಳು ಆಡಿದ್ದೇ ಕಡಿಮೆ
ವಿರಾಟ್ ಕೊಹ್ಲಿ ಕಳೆದ ನವೆಂಬರ್‌ನಿಂದ ೬ ಟೆಸ್ಟ್, ೬ ಏಕದಿನ ಹಾಗೂ ೨ ಟಿ೨೦ ಪಂದ್ಯಗಳಲ್ಲಿ ಆಡಿದ್ದಾರೆ. ರೋಹಿತ್ ಶರ್ಮ ನಾಯಕತ್ವ ವಹಿಸಿಕೊಂಡ ಬಳಿಕ ೩ ಏಕದಿನ, ೯ ಟಿ೨೦ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಹೀಗಿರುವಾಗ ಟಿ೨೦ ವಿಶ್ವ ಕಪ್ ತಂಡವನ್ನು ರಚಿಸಲು ಮುಂದಾಗಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಈ ಆಟಗಾರರಿಗೆ ಯಾವ ಪ್ರದರ್ಶನದ ಆಧಾರದಲ್ಲಿ ಅವಕಾಶ ನೀಡುವುದು ಎಂಬ ಚಿಂತೆ ಶುರುವಾಗಿದೆ.
ಇದನ್ನೂ ಓದಿ: IND vs WI | ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ಭಾರತದ ಮುಂದಿನ ಸರಣಿ, ಶಿಖರ್ ಧವನ್‌ಗೆ ಕ್ಯಾಪ್ಟನ್ ಪಟ್ಟ