Site icon Vistara News

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Virender Sehwag

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನಿಂಗ್​ ಬ್ಯಾಟರ್ ವೀರೇಂದ್ರ ಸೆಹವಾಗ್​​(Virender Sehwag) ಸಂದರ್ಶನವೊಂದರಲ್ಲಿ ಡ್ಯಾಶಿಂಗ್​ ಉತ್ತರವನ್ನೇ ನೀಡಿದ್ದಾರೆ. ನಾವು ಶ್ರೀಮಂತರು, ಬೇರೆ ಕ್ರಿಕೆಟ್ ಲೀಗ್​ಗಳಲ್ಲಿ ಆಡುವುದಕ್ಕಾಗಿ ಬಡ ದೇಶಗಳಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್‌ ಕ್ರಿಸ್ಟ್‌(Adam Gilchrist) ಅವರು “ಇತರ ಟಿ20 ಲೀಗ್ ಗಳಲ್ಲಿ ಆಡುವುದಕ್ಕಾಗಿ ಭಾರತೀಯ ಕ್ರಿಕೆಟಿಗರು ಮುಂದೆ ಯಾವತ್ತಾದರೂ ಬೇರೆ ದೇಶಗಳಿಗೆ ಹೋಗುವ ಸಾಧ್ಯತೆಯಿದೆಯೇ?” ಎಂದು ಸೆಹವಾಗ್​ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸೆಹವಾಗ್​, ”ಇಲ್ಲ, ನಮಗೆ ಅದರ ಅಗತ್ಯವಿಲ್ಲ. ನಾವು ಶ್ರೀಮಂತರು. ಇತರ ಲೀಗ್ ಗಳಲ್ಲಿ ಆಡುವುದಕ್ಕಾಗಿ ನಾವು ಬಡ ದೇಶಗಳಿಗೆ ಹೋಗುವುದಿಲ್ಲ” ಎಂದು ಹೇಳಿದರು. ಈ ಉತ್ತರ ಕೇಳಿ ಗಿಲ್‌ ಕ್ರಿಸ್ಟ್‌ ಒಂದು ಕ್ಷಣ ಅಚ್ಚರಿಗೊಂಡು ಬ್ಯಾಟಿಂಗ್​ ಮಾತ್ರವಲ್ಲದೆ ಮಾತಿನಲ್ಲಿಯೂ ನೀವು ಸ್ಫೋಟಕವಾಗಿದ್ದೀರಿ ಎಂದು ಹೇಳಿದ್ದಾರೆ.

‘ನನ್ನನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ನಾನು ಐಪಿಎಲ್​ನಲ್ಲಿ ಆಡುತ್ತಿದ್ದೆ. ಆಗ ನನಗೆ ಬಿಬಿಎಲ್ ನಿಂದ ಒಂದು ಅವಕಾಶ ಬಂತು. ಈ ವೇಳೆ ನಾನು ಎಷ್ಟು ಹಣ ಸಿಗಬಹುದು ಎಂದು ಕೇಳಿದೆ. ಈ ವೇಳೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಒಂದು ಲಕ್ಷ ಡಾಲರ್ ಸಿಗಬಹುದು ಎಂದು ಹೇಳಿದರು. ತಕ್ಷಣ ಉತ್ತರಿಸಿದ ನಾನು, ಈ ಮೊತ್ತವನ್ನು ನಾನು ಪ್ರವಾಸಕ್ಕಾಗಿ ಖರ್ಚು ಮಾಡುತ್ತೇನೆ. ನನ್ನ ಕಳೆದ ರಾತ್ರಿಯ ಬಿಲ್ ಇದಕ್ಕಿಂತ ಹೆಚ್ಚಾಗಿತ್ತು ಎಂದು ಹೇಳಿ ಆಫರ್ ತಿರಸ್ಕರಿಸಿದೆ” ಎಂದು ಸೆಹವಾಗ್​ ಹೇಳಿದರು. ಈ ಮೂಲಕ ಭಾರತದ ಕ್ರಿಕೆಟ್​ ಲೀಗ್​ಗಳು ವಿದೇಶೀ ಲೀಗ್​ಗಳಿಗಿಂತ ಅತ್ಯಂತ ಶ್ರೀಮಂತ ಎನ್ನುವುದನ್ನು ಸೆಹವಾಗ್​ ಪರೋಕ್ಷವಾಗಿ ಹೇಳಿದರು.

ಇದನ್ನೂ ಓದಿ Virender Sehwag: ನಾಯಕತ್ವ ನೀಡುವುದಾಗಿ ನಂಬಿಕೆ ದ್ರೋಹ; ಸೆಹ್ವಾಗ್​​​ ಸ್ಫೋಟಕ ಹೇಳಿಕೆ

ಸೆಹವಾಗ್​ ಅವರು 14 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್​ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್​ನಲ್ಲಿ ತ್ರಿಶತಕ ​ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರದ್ದಾಗಿದೆ. ಸಚಿನ್​ ಬಳಿಕ ಏಕದಿನದಲ್ಲಿ ದ್ವಿಶತಕ ಬಾರಿಸಿದ ದ್ವಿತೀಯ ಆಟಗಾರನೂ ಹೌದು. ಒಟ್ಟು 251 ಏಕದಿನ ಪಂದ್ಯ ಆಡಿ 8273 ರನ್​ ಬಾರಿಸಿದ್ದಾರೆ. 15 ಶತಕ, 1 ದ್ವಿಶತಕ ಮತ್ತು 38 ಅರ್ಧಶತಕ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 8586 ರನ್​, 23 ಶತಕ 6 ದ್ವಿಶತಕ 2 ತ್ರಿಶತಕ ಬಾರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಿದ ಕೀರ್ತಿಯೂ ಇವರದ್ದಾಗಿದೆ. 19 ಟಿ20 ಪಂದ್ಯಗಳಿಂದ 394 ರನ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ 2728 ರನ್​ ಬಾರಿಸಿದ್ದಾರೆ. 2 ಶತಕ ಕೂಡ ಒಳಗೊಂಡಿದೆ.

Exit mobile version