ಲಖನೌ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಪುತ್ರಿ ವಾಮಿಕಾಳಿಗೆ 2 ವರ್ಷ ತುಂಬುತ್ತಾ ಬಂತು. ಆದರೆ, ಪುಟಾಣಿಯ ಮುಖ ನೋಡುವ ಭಾಗ್ಯ ಯಾರಿಗೂ ಲಭಿಸಿಲ್ಲ. ವಿರುಷ್ಕಾ ದಂಪತಿ ಪುತ್ರಿಯ ಮೊಗವನ್ನು ಸಾರ್ವಜನಿಕವಾಗಿ ತೋರಿಸದಿರುವುದು ಅಭಿಮಾನಿಗಳಿಗೆ ನಿರಾಸೆಯ ವಿಚಾರವಾಗಿತ್ತು. ಆದರೆ, ಅನಿರೀಕ್ಷಿತವಾಗಿ ಅವರೆಲ್ಲರಿಗೂ ಮುದ್ದು ವಾಮಿಕಾಳ ಮುಖ ನೋಡುವ ಭಾಗ್ಯ ಸಿಕ್ಕಿದೆ. ಅದಕ್ಕೆ ಕಾರಣ ಕೊಹ್ಲಿಯ ಧಾರ್ಮಿಕ ಪ್ರವಾಸ.
ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ತಮ್ಮ ಪುತ್ರಿಯ ಜತೆ ನಾನಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ ಅವರು ಉತ್ತರ ಪ್ರದೇಶದ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ್ದ ವಿಡಿಯೋ ವೈರಲ್ ಆಗಿದೆ. ವಿಡಿಯೊದಲ್ಲಿ ವಿರಾಟ್ ತಮ್ಮ ಪುತ್ರಿ ವಾಮಿಕಾಳನ್ನು ಎತ್ತಿಕೊಳ್ಳುತ್ತಿರುವ ದೃಶ್ಯವಿದ್ದು ಅದನ್ನು ವೀಕ್ಷಿಸಿದ ಲಕ್ಷಾಂತರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿರಾಟ್ ಅಭಿಮಾನಿಗಳಿಗೆ ವಾಮಿಕಾಳ ದರ್ಶನವಾಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ನೀಡಲಾಗಿಲ್ಲ. ರಜಾದಲ್ಲಿರುವ ಅವರು ಪತ್ನಿ ಹಾಗೂ ಪುತ್ರಿಯೊಂದಿಗೆ ತೀರ್ಥ ಕ್ಷೇತ್ರಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ಅಂತೆಯೇ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಪುಟಾಣಿ ವಾಮಿಕಾಳ ಹಾವಭಾವಗಳು ವಿಡಿಯೊದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳು ಕ್ಯೂಟ್ ಎಂದಿದ್ದಾರೆ.
ಮೊದಲ ಹುಟ್ಟು ಹಬ್ಬದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮಗುವಿನೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಆದರೆ, ಅಲ್ಲೂ ಮುಖ ತೋರಿಸಿರಲಿಲ್ಲ.
1967ರಲ್ಲಿ ನಿರ್ಮಾಣಗೊಂಡ ನೀಮ್ ಕರೋಲಿ ಬಾಬಾ ಅವರ ಸಮಾಧಿ ಇರುವ ಆಶ್ರಮಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ರಾಮ- ಸೀತೆಯ ಮಂದಿರವೂ ಇಲ್ಲದೆ. ಅಂತೆಯೇ ಈ ಆಶ್ರಮಕ್ಕೆ ದೊಡ್ಡ ಸಂಖ್ಯೆಯ ಅನುಯಾಯಿಗಳಿದ್ದಾರೆ. ಸ್ಟಾರ್ ದಂಪತಿ ಇದೇ ವೇಳೆ ಮಾ ಆನಂದಮತಿ ಆಶ್ರಮಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ಪ್ರಸಾದ ಸ್ವೀಕರಿಸಿದ ಅವರು ಉತ್ತರಾಖಂಡದ ಕೈಂಚಿಯಲ್ಲಿರುವ ಬಾಬಾ ನೀಮ್ ಕರೋಲಿ ದೇಗುಲದ ದರ್ಶನ ಕೂಡ ಮಾಡಿದ್ದಾರೆ.
ಇದನ್ನೂ ಓದಿ | Virat Kohli | ಟಿ20 ಕ್ರಿಕೆಟ್ನಿಂದ ತಾತ್ಕಾಲಿಕ ಬ್ರೇಕ್ ಪಡೆದ ವಿರಾಟ್ ಕೊಹ್ಲಿ; ಇದು ನಿವೃತ್ತಿಯ ಸೂಚನೆಯೇ?