ಮುಂಬಯಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಖ್ಯಾತ ಸ್ಪೋರ್ಟ್ಸ್ ಬ್ರಾಂಡ್ ಪೂಮಾ ಕಂಪೆನಿ ವಿರುದ್ಧ ಹೊಸ ಆರೋಪ ಹೊರಿಸಿದ್ದಾರೆ. ಅನುಮತಿ ಇಲ್ಲದೆ ಪೂಮಾ ತನ್ನ ಕಂಪನಿಯ ಪ್ರಚಾರಕ್ಕಾಗಿ ನನ್ನ ಫೋಟೋವನ್ನು ಬಳಸಿಕೊಂಡಿದೆ ಎಂದು ಅನುಷ್ಕಾ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಆರೋಪಿಸಿದ್ದಾರೆ.
ಪೂಮಾ ಕಂಪೆನಿಯ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅನುಷ್ಕಾ, ತಕ್ಷಣ ಫೋಟೋಗಳನ್ನು ತೆಗೆದುಹಾಕಬೇಕು ಎಂದಿದ್ದಾರೆ. ಇದೇ ವಿಚಾರವಾಗಿ ವಿರಾಟ್ ಕೊಹ್ಲಿ ಕೂಡ ತನ್ನ ಮಡದಿಗೆ ಸಾಥ್ ನೀಡಿದ್ದು, ಕೂಡಲೇ ಈ ವಿಷಯವನ್ನು ಪರಿಹರಿಸುವಂತೆ ಪೂಮಾ ಇಂಡಿಯಾವನ್ನು ಕೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅನುಷ್ಕಾ ಶರ್ಮಾ ಆರೋಪ ಮಾಡಿರುವ ಸ್ಟೋರಿಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಪೂಮಾ ಇಂಡಿಯಾ ಈಸಮಸ್ಯೆಯನ್ನು ಪರಿಹರಿಸಬೇಕು ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಅನುಷ್ಕಾ ಶರ್ಮಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೂಮಾ ಇಂಡಿಯಾವನ್ನು ಟ್ಯಾಗ್ ಮಾಡಿ, ‘ಅನುಮತಿ ಇಲ್ಲದೆ ಯಾವುದೇ ಬ್ರ್ಯಾಂಡ್ ಪ್ರಚಾರಕ್ಕಾಗಿ ನೀವು ನನ್ನ ಫೋಟೊಗಳನ್ನು ಬಳಸಲು ಸಾಧ್ಯವಿಲ್ಲ, ಏಕೆಂದರೆ ನಾನು ನಿಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಅಲ್ಲ. ದಯವಿಟ್ಟು ಕೂಡಲೇ ನನ್ನ ಫೋಟೊಗಳನ್ನು ನಿಮ್ಮ ಪ್ರಚಾರದಿಂದ ತೆಗೆದುಹಾಕಿ ಎಂದು ಹೇಳಿದ್ದರು.
ಇನ್ನೊಂದಡೆ ಅನುಷ್ಕಾ ಮತ್ತು ಪೂಮಾ ಇಂಡಿಯಾ ತಮ್ಮ ಮಾರ್ಕೆಟಿಂಗ್ ತಂತ್ರಕೋಸ್ಕರ ಈ ರೀತಿ ಮಾಡಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕಂಪನಿಯ ಹೆಸರನ್ನು ಮುನ್ನಲೆಗೆ ತರಲು ಉದ್ದೇಶಪೂರ್ವಕವಾಗಿ ಈ ರೀತಿಯ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಡಿವೋರ್ಸ್ ನೀಡಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಆದರೆ ಇದು ಅಸಲಿಗೆ ಕಾರ್ಯಕ್ರಮವೊಂದರ ಪ್ರಚಾರಕ್ಕೋಸ್ಕರ ಈ ರೀತಿ ಮಾಡಲಾಗಿದೆ ಎಂಬ ಸತ್ಯಾಂಶ ಬಳಿಕ ತಿಳಿದು ಬಂದಿತ್ತು. ಇದೀಗ ಈ ಘಟನೆಯೂ ಇಂತಹದ್ದೇ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | Team India | ಆಡಲು ಆಗದಿದ್ದರೆ ಮೊಟ್ಟೆ ಅಥವಾ ಬಾಳೆ ಹಣ್ಣಿನ ಅಂಗಡಿ ಇಡಿ; ಕಪಿಲ್ ದೇವ್ ಹೇಳಿದ್ದು ಯಾರಿಗೆ?