ಬೆಂಗಳೂರು: ಇಂಡಿಯನ್ ಗ್ರ್ಯಾನ್‌ಪ್ರಿ(Indian Grand Prix) ಅಥ್ಲೆಟಿಕ್ ಕೂಟದಲ್ಲಿ ತಮಿಳುನಾಡಿನ ಆರ್.ವಿದ್ಯಾ ರಾಮರಾಜ್(R Vithya Ramraj) ಅವರು ಪಿ.ಟಿ.ಉಷಾ(PT Usha) ಅವರ 39 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡರು. ಸೋಮವಾರ ನಡೆದ ಮಹಿಳೆಯರ 400 ಮೀ. ಹರ್ಡಲ್ಸ್(400m hurdles) ಸ್ಪರ್ಧೆಯಲ್ಲಿ ವಿದ್ಯಾ 55.43 ಸೆಕೆಂಡ್ಗಳಲ್ಲಿ ಪೂರೈಸಿದರು.
ಭಾರತ ಮಾಜಿ ಅಥ್ಲೀಟ್ ಆಗಿರುವ ಪಿಟಿ ಉಷಾ ಅವರು 1984ರ ಲಾಸ್ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 55.42 ಸೆಕೆಂಡ್ಗಳಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ(PT Usha national record) ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದಿದ್ದರು. 24 ವರ್ಷದ ವಿದ್ಯಾ ಅವರು 0.01 ಸೆಕೆಂಡ್ ಅಂತರದಲ್ಲಿ ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು.
ಮ್ಯಾರಥಾನ್‌ನಲ್ಲಿ ಶಿವನಾಥ್ ಸಿಂಗ್ ಅವರ ಹೆಸರಿನಲ್ಲಿರುವ ದಾಖಲೆ ಭಾರತದ ಅಥ್ಲೆಟಿಕ್ಸ್‌ನಲ್ಲಿರುವ ಅತ್ಯಂತ ಹಳೆಯ ದಾಖಲೆಯಾಗಿದೆ. ಉಷಾ ಅವರಿಗೆ ಎರಡನೇ ಸ್ಥಾನ. ಈಗ ಮೂರನೇ ಸ್ಥಾನ ಆರ್.ವಿದ್ಯಾ ಪಾಲಾಗಿದೆ.
ಶ್ರೇಷ್ಠ ಪ್ರದರ್ಶನದ ಬಳಿಕ ಮಾತನಾಡಿದ ಆರ್.ವಿದ್ಯಾ, ‘ಉಷಾ ಮೇಡಂ ಭಾರತದ ದಿಗ್ಗಜ ಅಥ್ಲೀಟ್. ಅವರೇ ನನಗೆ ಸ್ಫೂರ್ತಿ. ಅವರ ದಾಖಲೆಯನ್ನು ಇಷ್ಟು ಸುದೀರ್ಘ ಅವಧಿಯವರೆಗೆ ಯಾರಿಗೂ ಮುರಿಯಲು ಆಗಿಲ್ಲ. ಇದನ್ನು ಸಾಧಿಸಬೇಕು ಎಂಬ ಛಲದಲ್ಲಿ ನಾನು ಕಣಕ್ಕಿಳಿದಿದ್ದೆ’ ಆದರೆ ಅಲ್ಪ ಅಂತರದಿಂದ ಇದು ಸಾಧ್ಯವಾಗದೆ ಹೋಯಿತು. ಮುಂದಿನ ಏಷ್ಯನ್ ಗೇಮ್ಸ್ನಲ್ಲಿ ಇದನ್ನು ಮೀರಿ ನಿಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.
ಇದನ್ನೂ ಓದಿ ಏಷ್ಯನ್ ಗೇಮ್ಸ್‌ಗೆ ಭಾರತ ಕ್ರಿಕೆಟ್ ತಂಡದ ಜೆರ್ಸಿ ಅನಾವರಣ; ಕಲರ್ ಫುಲ್ ಎಂದ ನೆಟ್ಟಿಗರು
ಏಷ್ಯಾಡ್ಗೆ ಮತ್ತೆ ಮೂವರ ಸೇರ್ಪಡೆ
ಇದೇ ತಿಂಗಳು ಚೀನಾದಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್‌ಗೆ ಮತ್ತೆ ಮೂರು ಭಾರತೀಯ ಅಥ್ಲೀಟ್ಗಳನ್ನು ಸೇರ್ಪಡೆಗೊಳಿಸಲಾಗಿದೆ. ಸೋಮವಾರ ಭಾರತೀಯ ಅಥ್ಲೆಟಿಕ್ ಫೆಡರೇಷನ್ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧಿ, ಹರಿಯಾಣದ ಪ್ರೀತಿ ಲಾಂಬಾ, ಸ್ಪ್ರಿಂಟ್ ಓಟಗಾರ ಅಮ್ಲನ್ ಬೊರ್ಗೊಹೈನ್ ಮತ್ತು 400 ಮೀ. ಓಟಗಾರ್ತಿ ಪ್ರಾಚಿ ಅವರನ್ನು ಸೇರ್ಪಡೆಗೊಳಿಸಿದೆ.
ಸೋಮವಾರ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ ಕೂಟದ ಮಹಿಳೆಯರ 3000 ಮೀ. ಓಟವನ್ನು ಲಾಂಬಾ 9ನಿ.45.13 ಸೆ.ಗಳಲ್ಲಿ ಓಡಿ ಎಎಫ್‌ಐ ನಿಗದಿಪಡಿಸಿದ ಅರ್ಹತಾ ಮಾನದಂಡವನ್ನು (9ನಿ.47 ಸೆ.) ಮೀರಿದ್ದರು.
ಚೀನಾ ತಲುಪಿದ ಬಾಕ್ಸಿಂಗ್ ತಂಡ
ಭಾರತದ ಬಾಕ್ಸಿಂಗ್ ತಂಡ(Indian boxing team) ಈಗಾಗಲೇ ಚೀನಾ ತಲುಪಿದೆ. 2 ಬಾರಿ ವಿಶ್ವ ಚಾಂಪಿಯನ್ ನಿಖತ್ ಜರೀನ್(Nikhat Zareen) ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಜತೆಗೆ ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್(Lovlina Borgohain) ಕೂಡ ಕಣಕ್ಕಿಳಿಯಲಿದ್ದಾರೆ. ಉಭಯ ಆಟಗಾರ್ತಿಯ ಮೇಲೆ ಪದಕ ಬರವಸೆಯನ್ನು ಇಡಲಾಗಿದೆ.
ಮಹಿಳೆಯರ ವಿಭಾಗದಲ್ಲಿ ಜಾಸ್ಮೀನ್, ಅರುಂಧತಿ ಚೌಧರಿ, ಪ್ರೀತಿ ಪವಾರ್, ಪರ್ವೀನ್ ಹೂಡಾ ಕೂಡಾ ಕಣಕ್ಕಿಳಿಯಲಿದ್ದಾರೆ. ಅಚ್ಚರಿ ಎಂದರೆ ಏಷ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಂಘಲ್, ವಿಶ್ವ ಚಾಂಪಿಯನ್ ನೀತು ಗಂಗಾಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಪುರುಷರ ವಿಭಾಗದಲ್ಲಿ ದೀಪಕ್ ಭೋರಿಯ ತಂಡ ಮುನ್ನಡೆಸಲಿದ್ದು, ಸಚಿನ್, ಶಿವ ಥಾಪ, ನಿಶಾಂತ್ ದೇವ್, ಲಕ್ಷ್ಯ ಚಹರ್, ಸಂಜೀತ್ ಹಾಗೂ ನರೇಂದರ್ ಬರ್ವಾಲ್ ಸಹ ಆಡಲಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಕೂಟವಾಗಿರುವ ಕಾರಣ ಏಷ್ಯಾದ ಬಾಕ್ಸರ್‌ಗಳಿಗೆ ಇದು ಮಹತ್ವದ ಟೂರ್ನಿಯಾಗಿದೆ.