ನವದೆಹಲಿ: ಇದೇ ತಿಂಗಳು ಚೀನಾದ ಹ್ಯಾಂಗ್ಝೂನಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್‌ನ(Asian Games 2023) ಕ್ರಿಕೆಟ್ ಟೂರ್ನಿಗೆ ಮಹಿಳೆಯರ ಮತ್ತು ಪುರುಷರ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ, ಪ್ರಸ್ತುತ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್(VVS Laxman) ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಸಾಗುತ್ತಿರುವ ಏಷ್ಯಾಕಪ್ ಮತ್ತು ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಕಾರಣ ತಂಡದ ಪ್ರಮುಖ ಕೋಚ್ ರಾಹುಲ್ ದ್ರಾವಿಡ್, ವಿಶ್ವಕಪ್ ಆಡಲಿರುವ ಭಾರತ ತಂಡದ ಜತೆಗೆ ಇರಲಿದ್ದಾರೆ. ಹೀಗಾಗಿ ಲಕ್ಷ್ಮಣ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಲಕ್ಷ್ಮಣ್ ಅವರು ದ್ರಾವಿಡ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಹಲವು ಸರಣಿಯಲ್ಲಿ ಕೋಚ್ ಆಗಿ ಮುನ್ನಡೆಸಿದ್ದಾರೆ. ಬೌಲಿಂಗ್ ಕೋಚ್ ಆಗಿ ಸಾಯಿರಾಜ್ ಬಹುತುಲೆ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮುನೀಶ್ ಬಾಲಿ ಕೂಡ ಭಾರತ ತಂಡದೊಂದಿಗೆ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಗಾಯಕ್ವಾಡ್ ನಾಯಕ
ಭಾರತ ಪುರುಷರ ತಂಡವನ್ನು ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ವರದಿಗಳ ಪ್ರಕಾರ ಸೋಮವಾರದಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎಲ್ಲ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಟೂರ್ನಿಗೆ ಭಾರತ ತಂಡ ಜೆರ್ಸಿಯನ್ನು ಬಿಡುಗಡೆಗೊಳಿಸಿದೆ. ‘ಇಂಡಿಯಾ’ ಎಂದು ಬರೆದಿರುವ ಜೆರ್ಸಿಯಲ್ಲಿ ನಾಯಕ ಗಾಯಕ್ವಾಡ್, ಸಿಕ್ಸರ್ ಕಿಂಗ್ ಖ್ಯಾತಿಯ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಮಿಂಚಿದ್ದಾರೆ.
ಭಾರತ ಮೊದಲ ಬಾರಿ ಸ್ಪರ್ಧೆ
ಕ್ರಿಕೆಟ್ ಸ್ಪರ್ಧೆ ಇಂತಹ ಕೂಟಗಳಲ್ಲಿ ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಮೊದಲ ಬಾರಿ ಆಡುತ್ತಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.
ಇದನ್ನೂ ಓದಿ Asian Games: ಚೀನಾಕ್ಕೆ ತೆರಳಿದ ಭಾರತೀಯ ಅಥ್ಲೀಟ್‌ಗಳು
ಭಾರತ ಪುರುಷರ ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿ.ಕೀ)
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್
ಮಹಿಳಾ ಕ್ರಿಕೆಟ್ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆತುಜಾ,ಅನುಷಾ ಬಾರೆಡ್ಡಿ.
ಸ್ಟ್ಯಾಂಡ್‌ಬೈ ಆಟಗಾರರು: ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್.
38 ವಿಭಾಗಗಳಲ್ಲಿ ಸ್ಪರ್ಧೆ
ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್‌ಬಾಲ್ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್‌ಬಾಲ್ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.