ದುಬೈ : ICC ಕ್ರಿಕೆಟ್ ಸಮಿತಿಗೆ ಮಾಜಿ ಆಟಗಾರ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ಇವರ ಜತೆಗೆ ನ್ಯೂಜಿಲೆಂಡ್ ತಂಡದ ಮಾಜಿ ಸ್ಪಿನ್ನರ್ ಡೇನಿಯಲ್ ವೆಟೋರಿ ಕೂಡ ಸಮಿತಿಗೆ ನೇಮಕಗೊಂಡಿದ್ದಾರೆ. ಇವರು ಜಾಗತಿಕ ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ಕ್ರಿಕೆಟ್ ಆಟಗಾರರನ್ನು ಪ್ರತಿನಿಧಿಸಲಿದ್ದಾರೆ.
ಭಾರತ ತಂಡದ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಅವರನ್ನು ಕಳೆದ ವರ್ಷ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಗೆ ನೇಮಕ ಮಾಡಲಾಗಿತ್ತು. ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾ ಕೋಚ್ ಆದ ಬಳಿಕ ತೆರವಾದ ಆ ಸ್ಥಾನಕ್ಕೆ ಹೈದಾರಾಬಾದ್ ಮೂಲದ ಸ್ಪೆಷಲಿಸ್ಟ್ ಆಟಗಾರನನ್ನು ನೇಮಕ ಮಾಡಲಾಗಿತ್ತು. ಕ್ರಿಕೆಟ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಅವರು ಇತ್ತೀಚೆಗೆ ಟಿ೨೦ ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಿರುವ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆ ಸರಣಿಯ ಎರಡೂ ಪಂದ್ಯದಲ್ಲಿ ಗೆದ್ದಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡದ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.
ಲಕ್ಷ್ಮಣ್ ಅವರು ಕ್ರಿಕೆಟ್ ಕುರಿತು ಹೊಂದಿರುವ ಅನುಭವ ಹಾಗೂ ಕಿರಿಯ ಕ್ರಿಕೆಟಿಗರನ್ನು ಅವರು ಬೆಳೆಸುವ ರೀತಿಯಿಂದಾಗಿ ಐಸಿಸಿಯೂ ಅವರನ್ನು ಕ್ರಿಕೆಟ್ ಕಮಿಟಿಗೆ ನೇಮಕ ಮಾಡಿದೆ. ಅವರು ಕ್ರಿಕೆಟ್ ಕ್ಷೇತ್ರದ ಬದಲಾವಣೆಗಳು ಹಾಗೂ ಸುಧಾರಣೆಗಾಗಿ ಕೆಲಸ ಮಾಡಲಿದ್ದಾರೆ.