ಬೆಂಗಳೂರು: ಪ್ರಸ್ತುತ ಎನ್ಸಿಎ(NCA) ಅಧ್ಯಕ್ಷರಾಗಿರುವ ವಿವಿಎಸ್ ಲಕ್ಷ್ಮಣ್(VVS Laxman) ಅವರ ಅಧಿಕಾರಾವಧಿಯು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಐಪಿಎಲ್ನಲ್ಲಿ ಕೋಚಿಂಗ್ ನಡೆಸುವ ಸಲುವಾಗಿ ಲಕ್ಷ್ಮಣ್ ಮತ್ತೊಂದು ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ(VVS Laxman To Quit NCA) ಹೊಂದಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಲಕ್ಷ್ಮಣ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಲಕ್ಷ್ಮಣ್ ಅವರನ್ನು ಲಕ್ನೋ ಫ್ರಾಂಚೈಸಿ ಈಗಾಗಲೇ ಸಂಪರ್ಕಿಸಿದ್ದು, ಕೋಚ್ ಆಗುವಂತೆ ಕೇಳಿಕೊಂಡಿದೆ ಎನ್ನಲಾಗಿದೆ. ಕೋಚ್ ಆಗಲು ಲಕ್ಷ್ಮಣ್ ಕೂಡ ಒಪ್ಪಿಕೊಂಡಿದ್ದಾರೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಎನ್ಸಿಎ ಅಧ್ಯಕ್ಷರಾಗುವ ಮುನ್ನ ಲಕ್ಷ್ಮಣ್ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಕೆಲವು ವರ್ಷ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಕೋಚಿಂಗ್ ಕಡೆ ಗಮನಹರಿಸಿದ್ದಾರೆ ಎನ್ನಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪ್ರಸ್ತುತ ಆಸ್ಟ್ರೇಲಿಯಾದ ಜಸ್ಟೀನ್ ಲ್ಯಾಂಗ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರನ್ನು ತಂಡಕ್ಕೆ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಇವರ ಮಾರ್ಗದರ್ಶನದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಲೀಗ್ ಹಂತದಲ್ಲೇ ಮುಗ್ಗರಿಸಿ ಹೊರಬಿದ್ದಿತ್ತು. ಹೀಗಾಗಿ ಫ್ರಾಂಚೈಸಿ ಹೊಸ ಕೋಚ್ ಹುಡುಕಾಟ ಆರಂಭಿಸಿದೆ ಎಂದು ತಿಳಿದುಬಂದಿದೆ.
ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ ಬಳಿಕ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. ದ್ರಾವಿಡ್ ಬಳಿಕ ಲಕ್ಷ್ಮಣ್ ಅವರೇ ಭಾರತ ತಂಡದ ಮುಂದಿನ ಕೋಚ್ ಎಂದು ಹೇಳಲಾಗಿತ್ತು. ಆದರೆ, ಅವರು ಈ ಆಫರ್ ತಿರಸ್ಕರಿಸಿದ್ದರು. ಹೀಗಾಗಿ ಗಂಭೀರ್ಗೆ ಈ ಅವಕಾಶ ಲಭಿಸಿತು.
ಮತ್ತೆ ಐಪಿಎಲ್ನತ್ತ ದ್ರಾವಿಡ್?
ರಾಹುಲ್ ದ್ರಾವಿಡ್ ಕೂಡ ಐಪಿಎಲ್ನಲ್ಲಿ ಕೋಚ್ ಆಗಲು ಉತ್ಸುಕರಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ದ್ರಾವಿಡ್ ಅವರು ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ Rahul Dravid: ಮತ್ತೆ ಐಪಿಎಲ್ ಕೋಚಿಂಗ್ನತ್ತ ಮುಖ ಮಾಡಿದ ರಾಹುಲ್ ದ್ರಾವಿಡ್!
“ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ” ಎಂದು ಕ್ರಿಕ್ಬಜ್ ವರದಿ ಮಾಡಿದೆ. ರಾಹುಲ್ ದ್ರಾವಿಡ್ ಅವರು ಈ ಹಿಂದೆ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಅಂಡರ್-19 ಮತ್ತು ಎನ್ಸಿಎಯಲ್ಲಿ ಕಾರ್ಯನಿರ್ವಹಿಸಿದ್ದರು.
ಭಾರತಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿದ ಕೋಚ್ ದ್ರಾವಿಡ್ ಅವರನ್ನು ಕೆಕೆಆರ್ ಮಾತ್ರವಲ್ಲದೆ ಇದುವರೆಗೂ ಕಪ್ ಗೆಲ್ಲದ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕೋಚ್ ಮಾಡಲು ರೇಸ್ನಲ್ಲಿವೆ ಎಂದು ಹೇಳಲಾಗಿದೆ. ಡೆಲ್ಲಿ ತಂಡದ ಮೆಂಟರ್ ಆಗಿರುವ ಸೌರವ್ ಗಂಗೂಲಿ ಅವರು ದ್ರಾವಿಡ್ ಮನವೊಲಿಸಿ ಕೋಚ್ ಆಗುವಂತೆ ಒಪ್ಪಿಸುವ ಸಾಧ್ಯತೆಯೂ ಇದೆ. ಏಕೆಂದರೆ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಕೋಚ್ ಆಗಿ ಮಾಡಿದ್ದು ಕೂಡ ಗಂಗೂಲಿ. ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ಗಂಗೂಲಿ ಒತ್ತಾಯ ಪೂರ್ವಕವಾಗಿ ದ್ರಾವಿಡ್ ಅವರನ್ನು ಕೋಚ್ ಆಗುವಂತೆ ಒಪ್ಪಿಸಿದ್ದರು. ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯಲು ಹಿಂದೇಟು ಹಾಕಿರುವ ದ್ರಾವಿಡ್ ಐಪಿಎಲ್ ಕೋಚಿಂಗ್ ನಡೆಸಲಿದ್ದಾರಾ ಎಂದು ಕಾದು ನೋಡಬೇಕಿದೆ.