Site icon Vistara News

Wahab Riaz: ವಿಶ್ವಕಪ್​ಗೂ ಮುನ್ನ ಕ್ರಿಕೆಟ್​ಗೆ​ ವಿದಾಯ ಹೇಳಿದ ಪಾಕ್ ತಂಡದ​ ಸ್ಟಾರ್​ ಬೌಲರ್​

Pakistan pacer Wahab Riaz

ಕರಾಚಿ: ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್​ಗೆ(World Cup 2023) ಸಿದ್ಧತೆ ನಡೆಸುತ್ತಿದ್ದ ಪಾಕಿಸ್ತಾನ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್​ ಅನುಭವಿ ವೇಗಿ ವಹಾಬ್​ ರಿಯಾಜ್(Wahab Riaz)​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ(Wahab Riaz Retirement). ಆದರೆ ಫ್ರಾಂಚೈಸಿ ಕ್ರಿಕೆಟ್​ ಟೂರ್ನಿಯಲ್ಲಿ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪಾಕಿಸ್ತಾನ ತಂಡದ ಪರ 15 ವರ್ಷಗಳ ಕಾಲ ಕ್ರಿಕೆಟ್​ ಆಡಿದ ವಹಾಬ್​ ತಮ್ಮ ಈ ಸುದೀರ್ಘ ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವದಾದ್ಯಂತ ನಡೆಯುವ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ.

ಪಾಕಿಸ್ತಾನ ತಂಡದ ವೇಗಿಗಳಲ್ಲಿ(Pakistan pacer Wahab Riaz) ಒಬ್ಬರಾಗಿದ್ದ ಎಡಗೈ ಬೌಲರ್ ವಹಾಬ್ ರಿಯಾಜ್ ಒಟ್ಟು 156 ಪಂದ್ಯಗಳನ್ನು ಆಡಿ 237 ವಿಕೆಟ್​ಗಳನ್ನು ಕಬಳಿಸಿದ್ದಾರೆ. 2019ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದರು. 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ ತಂಡದ ಭಾಗವಾಗಿರುವ ಅವರು 2020 ರ ಬಳಿಕ ಪಾಕ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಪಾಕ್​ ಕ್ರೀಡಾ ಸಚಿವನಾಗಿ ಕರ್ತವ್ಯ ನಿರ್ವಹಣೆ

ಪಾಕಿಸ್ತಾನ ತಂಡದ ಪರ ಅವಕಾಶ ಸಿಗದ ಕಾರಣ ಟಿ20 ಲೀಗ್​ ಕಡೆ ಮುಖ ಮಾಡಿದ ರಿಯಾಜ್​ ಈ ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 400 ಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ರಾಜಕೀಯದಲ್ಲಿಯೂ ಸಕ್ರೀಯರಾಗಿರುವ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕ್ರೀಡಾ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ Wahab Riaz: ಪಂಜಾಬ್​ನ ಕ್ರೀಡಾ ಸಚಿವರಾಗಿ ಆಯ್ಕೆಯಾದ ಪಾಕಿಸ್ತಾನ ಕ್ರಿಕೆಟ್​ ತಂಡದ ವೇಗಿ!

ಧನ್ಯವಾದ ತಿಳಿಸಿದ ರಿಯಾಜ್

“ಅಂತಾರಾಷ್ಟ್ರೀಯ ಪಿಚ್‌ನಿಂದ ಹೊರನಡೆಯುತ್ತಿದ್ದೇನೆ! ಇದೊಂದು ನಂಬಲಾಗದ ಪ್ರಯಾಣ. ನನ್ನ 15 ವರ್ಷಗಳ ಕ್ರಿಕೆಟ್​ ಜರ್ನಿಯಲ್ಲಿ ಸಹಕರಿಸಿದ ಪಾಕ್ ಕ್ರಿಕೆಟ್​ ಮಂಡಳಿ, ನನ್ನ ಕುಟುಂಬ, ತರಬೇತುದಾರರು, ಮಾರ್ಗದರ್ಶಕರು, ತಂಡದ ಸಹ ಆಟಗಾರರು, ಅಭಿಮಾನಿಗಳು ಮತ್ತು ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹೆಚ್ಚು ತೊಡಗಿಕೊಳ್ಳಲಿದ್ದೇನೆ” ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

Exit mobile version