Site icon Vistara News

Wanindu Hasaranga: ಲಸಿತ್ ಮಾಲಿಂಗ ದಾಖಲೆ ಮುರಿದ ವನಿಂದು ಹಸರಂಗ

Wanindu Hasaranga

ಕೊಲಂಬೊ: ಅಫಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ವನಿಂದು ಹಸರಂಗ(Wanindu Hasaranga) ತಮ್ಮದೇ ತಂಡದ ಮಾಜಿ ಆಟಗಾರ ಲಸಿತ್ ಮಾಲಿಂಗ(Lasith Malinga) ಅವರ ದಾಖಲೆಯನ್ನು ಮುರಿದಿದ್ದಾರೆ. ಅಫಘಾನಿಸ್ತಾನ ವಿರುದ್ಧದ ದ್ವಿತೀಯ ಟಿ20ಯಲ್ಲಿ 2 ವಿಕೆಟ್​ ಕಬಳಿಸುವುದರೊಂದಿಗೆ ಹಸರಂಗ ಟಿ20ಯಲ್ಲಿ ಅತಿ ವೇಗವಾಗಿ 100 ವಿಕೆಟ್(100 T20I wickets)​ ಕಬಳಿಸಿದ ಲಂಕಾದ ಮೊದಲ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ಲಂಕಾ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 100 ವಿಕೆಟ್​ ಕಬಳಿಸಿದ ದಾಖಲೆ ಲಸಿತ್​ ಮಾಲಿಂಗ ಹೆಸರಿನಲ್ಲಿತ್ತು. ಮಾಲಿಂಗ 76 ಪಂದ್ಯಗಳನ್ನಾಡಿ ಈ ಮೈಲುಗಲ್ಲು ನಿರ್ಮಿಸಿದ್ದರು. ಆದರೆ ಇದೀಗ ಹಸರಂಗ 63 ಟಿ20 ಪಂದ್ಯಗಳ ಮೂಲಕ 100 ವಿಕೆಟ್​ಗಳನ್ನು ಪೂರ್ತಿಗೊಳಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಒಟ್ಟಾರೆಯಾಗಿ ಟಿ20 ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 100 ವಿಕೆಟ್​ ಕಿತ್ತ ಸಾಧಕರ ಪಟ್ಟಿಯಲ್ಲಿ ವನಿಂದು ಹಸರಂಗ ಅವರಿಗೆ ದ್ವಿತೀಯ ಸ್ಥಾನ. 53 ಪಂದ್ಯಗಳಲ್ಲಿ 100 ವಿಕೆಟ್​ ಕಿತ್ತ ಅಫಘಾನಿಸ್ತಾನದ ರಶೀದ್​ ಖಾನ್​ ಅಗ್ರಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IND vs ENG: ಬಾಜ್​ಬಾಲ್‌ ತಂತ್ರಕ್ಕೆ ಇಂಗ್ಲೆಂಡ್​ ಮಾಜಿ ನಾಯಕರ ಆಕ್ರೋಶ

ಟಿ20ಯಲ್ಲಿ ಅತಿ ವೇಗವಾಗಿ 100 ವಿಕೆಟ್​ ಕಿತ್ತ ಬೌಲರ್​ಗಳು


ರಶೀದ್​ ಖಾನ್​-53 ಪಂದ್ಯ

ವನಿಂದು ಹಸರಂಗ-63 ಪಂದ್ಯ

ಮಾರ್ಕ್ ಆದೀರ್​-73 ಪಂದ್ಯ

ಲಸಿತ್​ ಮಾಲಿಂಗ-76 ಪಂದ್ಯ

ಐಶ್​ ಸೋಧಿ-78 ಪಂದ್ಯ

ಡಂಬುಲ್ಲಾದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಹಸರಂಗ ನಾಲ್ಕು ಓವರ್‌ ಬೌಲಿಂಗ್​ನಲ್ಲಿ 19 ರನ್​ಗೆ 2 ವಿಕೆಟ್​ ಕಿತ್ತರು. ಸದ್ಯ ಹಸರಂಗ 15.36 ರ ಸರಾಸರಿಯಲ್ಲಿ 101 ವಿಕೆಟ್‌ಗಳನ್ನು ಮತ್ತು 6.78 ರ ಎಕಾನಮಿ ದರವನ್ನು ಹೊಂದಿದ್ದಾರೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆತಿಥೇಯ ಶ್ರೀಲಂಕಾ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಅಫಘಾನಿಸ್ತಾನ 17 ಓವರ್​ಗಳಲ್ಲಿ 115 ರನ್​ಗಳಿಗೆ ಸರ್ವಪತನ ಕಂಡು 72 ರನ್​ಗಳ ಹೀನಾಯ ಸೋಲು ಕಂಡಿತು.

ಟೆಸ್ಟ್​ಗೆ ವಿದಾಯ


ವನಿಂದು ಹಸರಂಗ ಅವರು ಕಳೆದ ವರ್ಷ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದರು. ಸೀಮಿತ ಓವರ್​ಗಳ ಕ್ರಿಕೆಟ್​ಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು. ಆಲ್​ರೌಂಡರ್​ ಆಗಿರುವ ಹಸರಂಗ 2020ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡುವ ಮೂಲಕ ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಒಟ್ಟಾರೆಯಾಗಿ 4 ಟೆಸ್ಟ್​ ಪಂದ್ಯಗಳನ್ನು ಆಡಿರುವ ಅವರು ಹೇಳಿಕೊಳ್ಳವಂತ ಸಾಧನೆಯನ್ನು ಮಾಡಿಲ್ಲ. ಕೇವಲ 4 ವಿಕೆಟ್​ ಮಾತ್ರ ಕಬಳಿಸಿದ್ದಾರೆ. ಬ್ಯಾಟಿಂಗ್​ನಲ್ಲಿ 196 ರನ್​ ಕಲೆಹಾಕಿದ್ದಾರೆ. 2021ರಲ್ಲಿ ಬಾಂಗ್ಲಾ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದರು. ಇದಾದ ಬಳಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

Exit mobile version