ಕೊಲಂಬೊ: ಭಾರತ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಶ್ರೀಲಂಕಾ ತಂಡ ನಾಯಕ ವನಿಂದು ಹಸರಂಗ(Wanindu Hasaranga) ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ರಾಷ್ಟ್ರೀಯ ಟಿ20 ತಂಡದ ನಾಯಕ ಹಸರಂಗ ಅವರು ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟನೆ ಮೂಲಕ ಮಾಹಿತಿ ನೀಡಿದೆ. ಹಸರಂಗ ರಾಜೀನಾಮೆಯಿಂದ ಇದೀಗ ಲಂಕಾ ಕ್ರಿಕೆಟ್ ಮಂಡಳಿ ನೂತನ ನಾಯಕನ ಹುಡುಕಾಟ ನಡೆಸಬೇಕಿದೆ.
ಭಾರತ ಮತ್ತು ಲಂಕಾ ನಡುವಣ ಟಿ20 ಸರಣಿ ಜುಲೈ 26, 27 ಮತ್ತು 29ರಂದು ನಡೆಯಲಿದೆ. ಟಿ20 ಸರಣಿ ಬಳಿಕ ಕೊಲಂಬೊದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಜರಗಲಿದೆ. ಹಸರಂಗ ಅವರು ನಾಯಕತ್ವ ತೊರೆಯಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಗಾಯದಿಂದಾಗಿ ಈ ಬಾರಿಯ ಐಪಿಎಲ್ನಲ್ಲಿಯೂ ಹಸರಂಗ ಆಡಿರಲಿಲ್ಲ. ಇತ್ತೀಚೆಗೆ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದ ಸಮಯದಲ್ಲಿ, ಹಸರಂಗ ಅವರು ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ರೂಪಿಸಿರುವ ಐಸಿಸಿ ನೀತಿ ಸಂಹಿತೆಯ 2.8 ನೇ ವಿಧಿಯನ್ನು ಉಲ್ಲಂಘಿಸಿದ್ದರು. ಹೀಗಾಗಿ ನಿಷೇಧ ಹೇರಲಾಗಿದೆ. ಪಂದ್ಯದ 37 ನೇ ಓವರ್ನಲ್ಲಿ ಹಸರಂಗ ಅಂಪೈರ್ ಒಬ್ಬರಿಂದ ಕ್ಯಾಪ್ ಕಸಿದುಕೊಂಡು ಅವರನ್ನು ಗೇಲಿ ಮಾಡಿದ್ದರು.
ಹಸರಂಗ ಅವರಿಗೆ ಪಂದ್ಯದ ಶುಲ್ಕದ ಶೇಕಡಾ ೫೦ರಷ್ಟು ದಂಡ ಕೂಡ ವಿಧಿಸಲಾಗಿದೆ. ಅವರು ತಮ್ಮ ಅಪರಾಧಕ್ಕಾಗಿ ಮೂರು ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಅವರ ಒಟ್ಟು ಡಿಮೆರಿಟ್ ಅಂಕಗಳನ್ನು ಎಂಟಕ್ಕೆ ಏರಿದೆ.
ಇದನ್ನೂ ಓದಿ Wanindu Hasaranga: ಐಪಿಎಲ್ನಿಂದ ಹೊರಬಿದ್ದ ಹೈದರಾಬಾದ್ ತಂಡದ ಹಸರಂಗ!
ಟೆಸ್ಟ್ಗೆ ವಿದಾಯ
ವನಿಂದು ಹಸರಂಗ ಅವರು ಕಳೆದ ವರ್ಷ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಸೀಮಿತ ಓವರ್ಗಳ ಕ್ರಿಕೆಟ್ಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು. ಆಲ್ರೌಂಡರ್ ಆಗಿರುವ ಹಸರಂಗ 2020ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಒಟ್ಟಾರೆಯಾಗಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಹೇಳಿಕೊಳ್ಳವಂತ ಸಾಧನೆಯನ್ನು ಮಾಡಿಲ್ಲ. ಕೇವಲ 4 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ 196 ರನ್ ಕಲೆಹಾಕಿದ್ದಾರೆ. 2021ರಲ್ಲಿ ಬಾಂಗ್ಲಾ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಇದಾದ ಬಳಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.