ಮೆಲ್ಬೋರ್ನ್: ಟಿ20 ವಿಶ್ವ ಕಪ್(T20 World Cup) ಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಆಸ್ಟ್ರೇಲಿಯಾ ತಂಡದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿವೆ. ಆಸ್ಟ್ರೇಲಿಯಾ ತಂಡಕ್ಕೆ ಸ್ಫೋಟಕ ಆಟಗಾರ ಕ್ಯಾಮರಾನ್ ಗ್ರೀನ್ ಸೇರ್ಪಡೆಯಾಗಿದ್ದು, ಜೋಸ್ ಇಂಗ್ಲಿಸ್ ತಂಡದಿಂದ ಹೊರಬಿದ್ದಿದ್ದಾರೆ. ಕೊನೆಯ ಕ್ಷಣದ ಆಸ್ಟ್ರೇಲಿಯಾದ ಈ ಬದಲಾವಣೆ ಇದೀಗ ಅನುಮಾನಕ್ಕೆ ಎಡೆಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ಆರಂಭವಾಗಿವೆ.
ವಿಶ್ವ ಕಪ್ ಸಮೀಪವಿದ್ದಾಗ ಇಂಗ್ಲಿಸ್ ಅವರನ್ನು ಗಾಲ್ಫ್ ಆಡಲು ಬಿಟ್ಟಿದ್ದು ಏಕೆ? ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನೆರಡು ದಿನ ಇರುವಂತೆ ಆಸಿಸ್‌ನ ಮೀಸಲು ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಗಾಯಗೊಂಡಿರುವುದಾದರೂ ಹೇಗೆ ? ಅದರಲ್ಲೂ ಗಾಲ್ಫ್ ಅತ್ಯಂತ ಸುರಕ್ಷಿತವಾಗಿ ಆಡುವ ಕ್ರೀಡೆ. ಹೀಗಿರುವಾಗ ಹೇಗೆ ಗಾಯಗೊಳ್ಳಲು ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನಾಟಕವಾಡಿತೇ ಆಸೀಸ್
ಭಾರತ ವಿರುದ್ಧದ ಟಿ20 ಸರಣಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಕ್ಯಾಮರಾನ್ ಗ್ರೀನ್, ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ಈ ಬಗ್ಗೆ ವಿರೋಧಗಳು ವ್ಯಕ್ತಗೊಂಡಿದ್ದವು. ಇದೀಗ ವಿಶ್ವ ಕಪ್ ಪಂದ್ಯಕ್ಕೆ ಎರಡು ದಿನ ಇರುವಂತೆ ಗ್ರೀನ್ ಆಸಿಸ್ ತಂಡ ಸೇರಿಕೊಳ್ಳುವ ಮೂಲಕ ಅನೇಕ ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ತಂಡದ ಪ್ಲೇಯಿಂಗ್ ಇಲೆವೆನ್ನ ಕಾಯಂ ಸದಸ್ಯರಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಗ್ರೀನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸೀಸ್ ಈ ನಾಟಕವಾಡಿತೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | T20 World Cup | ಭಾರತ-ಪಾಕ್ ಪಂದ್ಯಕ್ಕೆ ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?