ನವ ದೆಹಲಿ: ಇಶಾಂತ್ ಶರ್ಮಾ (Ishanth Sharma) 2021ರ ಕೊನೆಯಲ್ಲಿ ಸ್ಪರ್ಧೆಯಿಂದ ಹೊರಗುಳಿಯುವವರೆಗೂ ಅನೇಕ ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ (Team India) ವೇಗದ ಬೌಲಿಂಗ್ (Fast Bowling) ವಿಭಾಗದ ಪ್ರಮುಖ ಅಸ್ತ್ರ ಎನಿಸಿಕೊಂಡಿದ್ದರು. ಅದರಲ್ಲೂ ಟೆಸ್ಟ್ ತಂಡದ (Test Crikcket) ಮುಂಚೂಣಿ ಬೌಲರ್ ಪಾತ್ರ ವಹಿಸಿದ್ದರು. 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತ ತಂಡ ಚಾಂಪಿಯನ್ ಆಗುವಲ್ಲೂ ಪ್ರಧಾನ ಪಾತ್ರ ವಹಿಸಿದ್ದರು. ಆದರೆ, 2016 ಮತ್ತು 2021ರ ಅವಧಿಯಲ್ಲಿ ಅವರಿಗೆ ಹೆಚ್ಚು ಆಡಲು ಸಾಧ್ಯವಾಗಿಲ್ಲ. ಗಾಯದ ಸಮಸ್ಯೆ ಅವರಿಗೆ ಬಾಧಿಸಲು ಶುರುವಾಯಿತು. ಹೀಗಾಗಿ ಅವರ ವೃತ್ತಿ ಕ್ರಿಕೆಟ್ ಕುಸಿತ ಕಂಡಿತು.
ಗಾಯದ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಶಾಂತ್ ಅವರ ಸೀಮಿತ ಓವರ್‌ಗಳ ವೃತ್ತಿಜೀವನ ಮಸುಕಾಯಿತು. ಕೊನೆಯ ಬಾರಿಗೆ ನವೆಂಬರ್ 2021ರಲ್ಲಿ ಟೆಸ್ಟ್ ಆಡಿದ್ದರೆ, ಅವರ ಕೊನೆಯ ಏಕದಿನ ಪಂದ್ಯ ಜನವರಿ 2016ರಲ್ಲಿ ನಡೆದಿತ್ತು. ಅವರು ಭಾರತ ತಂಡದ ಪರ ಕೇವಲ 14 ಟಿ20 ಪಂದ್ಯಗಳಲ್ಲ ಮಾತ್ರ ಆಡಿದ್ದಾರೆ, ಕೊನೆಯದ್ದು ಅಕ್ಟೋಬರ್ 2013. ಗಾಯದ ಸಮಸ್ಯೆಯ ಕಾರಣಕ್ಕೆ ಇಶಾಂತ್ ಶರ್ಮಾ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಕಪ್‌ನಿಂದ ಹೊರಗುಳಿದಿದ್ದರು. ಇದೀಗ ಅವರು ತಮ್ಮ ಗಾಯದ ಸಮಸ್ಯೆಗಳ ಕುರಿತು ಮಾತನಾಡಿದ್ದು ಇಂಜೆಕ್ಷನ್ ತೆಗೆದುಕೊಂಡು ಪಂದ್ಯದಲ್ಲಿ ಅಡುವುದು ಅನವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಈ ಮೂಲಕ ವೃತ್ತಿ ಕ್ರಿಕೆಟ್‌ನಲ್ಲಿ ತಾವು ಅನುಭವಿಸಿದ ಯಾತನೆಯನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಣ್‌ವೀರ್ ಅಲಹಾಬಾದಿಯಾ ಅವರ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.
ನಾನು ನೋವಿನ ಸಮಸ್ಯೆಯಿಂದಾಗಿ 2015 ರ ವಿಶ್ವಕಪ್ ತಪ್ಪಿಸಿಕೊಂಡೆ. ನಾವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡಿದ್ದೆವು. ಅದು ಮಹೀ ಭಾಯ್ (ಎಂಎಸ್ ಧೋನಿ) ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ನನಗೆ ಇದ್ದಕ್ಕಿದ್ದಂತೆ ಮೊಣಕಾಲು ನೋವು ಕಾಣಿಸಿಕೊಂಡಿತು ಎಂಬುದಾಗಿ ಇಶಾಂತ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Team India : ಕ್ರಿಕೆಟ್ ಅಕಾಡೆಮಿ ಆರಂಭಿಸಿದ ವೇಗದ ಬೌಲರ್ ನಟರಾಜನ್
ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ನಿರಂತರ ಬೌಲಿಂಗ್ ಮಾಡುತ್ತಿದ್ದರು. ರವಿಚಂದ್ರನ್ ಅಶ್ವಿನ್ ಮೂರನೇ ಬೌಲರ್ ಆಗಿದ್ದರು. ಅವರೂ ದಣಿದಿದ್ದರು. ಅವರನ್ನು ನೋಡಿ ಬೇಸರವಾಯಿತು. ‘ಅವರು ಎಷ್ಟು ಹೊತ್ತು ಬೌಲಿಂಗ್ ಮಾಡುತ್ತಾರೆ ಎಂದು ಯೋಚಿಸಿದೆ. ನಾನು ಮತ್ತೆ ಬೌಲಿಂಗ್ ಮಾಡುವುದಾಗಿ ಫಿಸಿಯೋಗೆ ಹೇಳಿದೆ, ಅವರು ವೈದ್ಯರನ್ನು ಕರೆದು ಚುಚ್ಚುಮದ್ದನ್ನು ತೆಗೆದುಕೊಳ್ಳಿ. ಎಂದು ಸಲಹೆ ಕೊಟ್ಟರು ಎಂದು ಇಶಾಂತ್ ನೋವಿನ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.
ಇಂಜೆಕ್ಷನ್‌ನಿಂದ ವಿಶ್ವ ಕಪ್ ತಪ್ಪಿತು
ನಾನು ಪ್ರತಿ ಸೆಷನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದೆ. ನಾನು ಐದು ಸೆಷನ್ ಬೌಲಿಂಗ್ ಮಾಡಿದೆ. ಅದಕ್ಕಾಗಿ ನಾನು ಆರು ಚುಚ್ಚುಮದ್ದುಗಳನ್ನು ತೆಗೆದುಕೊಂಡೆ. ನನ್ನಿಂದಾಗಿ ನನ್ನ ತಂಡವು ಸೋಲುತ್ತಿದೆ ಎಂಬುದನ್ನು ಸಹಿಸಿಕೊಳ್ಳಲು ನನಗೆ ಆಗಲಿಲ್ಲ. ಇದು ಹಾನಿಕಾರಕವೆಂದು ಗೊತ್ತಿದೆ. ಆ ಸಮಯದಲ್ಲಿ ಡಂಕನ್ ಫ್ಲೆಚರ್ ನಮ್ಮ ತರಬೇತುದಾರರಾಗಿದ್ದರು. ಚುಚ್ಚುಮದ್ದು ತೆಗೆದುಕೊಳ್ಳಬೇಡಿ, ವಿಶ್ವಕಪ್ ಬರುತ್ತಿದೆ ಎಂದು ಅವರು ಎಚ್ಚರಿಸಿದ್ದರು. ಆದರೆ ನಾನು ಬೌಲಿಂಗ್ ಮಾಡದೇ ಹೋದರೆ ತಂಡಕ್ಕೆ ಮೋಸ ಮಾಡಿದಂತಾಗುತ್ತದೆ ಅದುಕೊಂಡು ಇಂಜೆಕ್ಷನ್ ತೆಗೆದುಕೊಂಡೆ. ಫ್ಲೆಚರ್ ಹೇಳಿದಂತೆ 2015ರ ವಿಶ್ವ ಕಪ್ ಅವಕಾಶ ತಪ್ಪಿತು ಎಂದು ಇಶಾಂತ್ ಹೇಳಿದ್ದಾರೆ.
2015ರ ವಿಶ್ವಕಪ್‌ನಲ್ಲಿ ಇಶಾಂತ್ ಅವರ ಬದಲಿಗೆ ಮೋಹಿತ್ ಶರ್ಮಾ ತಂಡ ಸೇರ್ಪಡೆಗೊಂಡರು. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ 95 ರನ್‌ಗಳಿಂದ ಸೋಲನುಭವಿಸಿತು. ನಂತರ ಆಸ್ಟ್ರೇಲಿಯಾ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಐದನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.