ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕು ಎನ್ನುವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (Washington Sundar) ಅವರ ಬಯಕೆ ಮತ್ತಷ್ಟು ದಿನ ಮುಂದೂಡಿಕೆಯಾಗಿದೆ. ಎಡ ಭುಜದ ನೋವಿನಿಂದಾಗಿ ಅವರು ಜಿಂಬಾಬ್ವೆ (IND vs ZIM ODI) ವಿರುದ್ಧ ನಡೆಯುವ ಮೂರು ದಿನಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಸುಂದರ್ ಬದಲು ಶಹಬಾಜ್ ಅಹ್ಮದ್ (Shahbaz Ahmed) ಅವರನ್ನು ಆಯ್ಕೆ ಮಾಡಲಾಗಿದೆ.
ಕೌಂಟಿ ಕ್ರಿಕೆಟ್‌ನ ಲಂಕಾಶೈರ್ ತಂಡದ ಪರವಾಗಿ ಏಕದಿನ ಪಂದ್ಯ ಆಡುವಾಗ ವಾಷಿಂಗ್ಟನ್ ಸುಂದರ್ ಅವರ ಎಡ ಭುಜಕ್ಕೆ ಗಾಯವಾಗಿದೆ. ಹಾಗಾಗಿ, ಆಗಸ್ಟ್ ೧೮ರಿಂದ ಜಿಂಬಾಬ್ವೆಯಲ್ಲಿ ಆರಂಭವಾಗುವ ಸರಣಿಗೆ ಅವರು ಅಲಭ್ಯರಾಗಿದ್ದಾರೆ. “ಓಲ್ಡ್ ಟ್ರಾಪರ್ಡ್ ನಡೆದ ಲಂಕಾಶೈರ್ ಹಾಗೂ ವರ್ಸೆಸ್ಟೈರ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದಾರೆ,” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ತಮಿಳುನಾಡು ಮೂಲದ ವಾಷಿಂಗ್ಟನ್ ಸುಂದರ್, ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ತಂಡಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ಆದರೆ, ಅನಾರೋಗ್ಯ ಹಾಗೂ ಗಾಯದ ಸಮಸ್ಯೆಯಿಂದ ಅವರು ತಂಡಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ೨೨ ವರ್ಷದ ಸುಂದರ್, ಭಾರತ ತಂಡದ ಪರ ನಾಲ್ಕು ಏಕದಿನ, ನಾಲ್ಕು ಟೆಸ್ಟ್ ಹಾಗೂ ೩೧ ಟಿ-೨೦ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ | IND vs ZIM ODI | ಜಿಂಬಾಬ್ವೆಗೆ ಹಾರಿದ ರಾಹುಲ್ ಬಳಗ