ಕೊಲಂಬೊ: ಭಾರತ ತಂಡಕ್ಕೆ ಗಾಯದ ಸಮಸ್ಯೆ ಬೆನ್ನು ಬಿಡುವಂತೆ ತೋರುತ್ತಿಲ್ಲ. ಒಬ್ಬ ಆಟಗಾರ ಗುಣಮುಖವಾದ ತಕ್ಷಣ ಮತ್ತೊಬ್ಬ ಆಟಗಾರ ಗಾಯಕ್ಕೀಡಾಗುತ್ತಿದ್ದಾನೆ. ವಿಶ್ವಕಪ್ ತಂಡದ ಸದಸ್ಯರಾಗಿರುವ ಶ್ರೇಯಸ್ ಅಯ್ಯುರ್(Shreyas Iyer) ಗಾಯಗೊಂಡ ಬೆನ್ನಲ್ಲೇ ಇದೀಗ ಅಕ್ಷರ್ ಪಟೇಲ್(Axar Patel) ಕೂಡ ಗಾಯಗೊಂಡು ಏಷ್ಯಾಕಪ್ನಿಂದ(Asia Cup final) ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಅಕ್ಷರ್ ಕೂಡ ವಿಶ್ವಕಪ್ ತಂಡದ ಸದಸ್ಯರಾಗಿದ್ದಾರೆ.
ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಗಾಯದ ಮಧ್ಯೆಯೂ ಅವರು ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಮೊಣಕೈ ಮತ್ತು ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಅವರು ಭಾನುವಾರ ನಡೆಯುವ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ವರದಿಗಳ ಪ್ರಕಾರ ಅವರು ಟೂರ್ನಿಯಿಂದ ಹೊರಬಿದ್ದಿದ್ದು ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಅವರ ಬದಲು ಸ್ಪಿನ್ ಆಲ್ರೌಂಡರ್ ಆಗಿರುವ ವಾಷಿಂಗ್ಟನ್ ಸುಂದರ್(Washington Sundar) ಭಾರತ ತಂಡ ಸೇರಿಕೊಂಡಿದ್ದಾರೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ.
7 ತಿಂಗಳ ಬಳಿಕ ಕಮ್ಬ್ಯಾಕ್
ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಅವರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಸನ್ರೈಸರ್ಸ್ ಹೈದಾರಾಬಾದ್ ತಂಡದ ಸದಸ್ಯರಾಗಿದ್ದರು. ಇದಕ್ಕೂ ಮುನ್ನ ಆರ್ಸಿಬಿ ಪರ ಅವರು ಆಡಿದ್ದರು. ಭಾರತ ತಂಡದ ಪರ 16 ಏಕದಿನ, 4 ಟೆಸ್ಟ್, 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 29.12 ಸರಾಸರಿಯಲ್ಲಿ 233 ರನ್ ಮತ್ತು 16 ವಿಕೆಟ್ ಉರುಳಿಸಿದ್ದಾರೆ. ಟಿ20ಯಲ್ಲಿ 29 ವಿಕೆಟ್ ಪಡೆದಿದ್ದಾರೆ. ಇದೇ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ಏಕದಿನ ಸರಣಿಯಲ್ಲಿ ಭಾರತ ಪರ ಕೊನೆಯ ಏಕದಿನ ಪಂದ್ಯ ಆಡಿದ್ದರು. ಬಳಿಕ ಗಾಯಗೊಂಡು ತಂಡದಿಂದ ಹೊರಗುಳಿದ್ದರು.
ಇದನ್ನೂ ಓದಿ Rashid Khan: ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್ಬೀರ್-ಆಲಿಯಾ ದಂಪತಿ
ಗಾಯದ ಮಧ್ಯೆಯೂ ಬ್ಯಾಟಿಂಗ್ ನಡೆಸಿದ್ದ ಅಕ್ಷರ್
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೊನೆಯ ತನಕ ಹೋರಾಡಿ ತಂಡಕ್ಕೆ ಗೆಲುವು ತಂದು ಕೊಡುವ ಪ್ರಯತ್ನ ಮಾಡಿದರು. ಈ ವೆಳೆ ಅವರಿಗೆ ಹಲವು ಬಾರಿ ಗಾಯದ ಸಮಸ್ಯೆ ಕಾಡಿತು. ಆದರೂ ಪದೇಪದೆ ನೋವು ನಿವಾರಕ ಸ್ಪ್ರೇ ಬಳಸಿ ಆಟವಾಡಿದ್ದರು. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಸರಿಯಾದ ಬೆಂಬಲ ಸಿಗದೆ ಪಂದ್ಯ ಸೋಲು ಕಂಡಿತು. 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 42 ರನ್ ಬಾರಿಸಿ ಮುಸ್ತಫಿಜುರ್ ರೆಹಮಾನ್ಗೆ ವಿಕೆಟ್ ಒಪ್ಪಿಸಿದರು. ಅವರ ವಿಕೆಟ್ ಪತನಗೊಳ್ಳುತ್ತಲೇ ಭಾರತ ತಂಡದ ಸೋಲು ಕೂಡ ಖಚಿತಗೊಂಡಿತು.
ಸೋಲು ಕಂಡ ಭಾರತ
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಬಾಂಗ್ಲಾದೇಶ ಆರಂಭಿಕ ಕುಸಿತದ ಮಧ್ಯೆಯೂ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 49.5 ಓವರ್ಗಳಲ್ಲಿ 259 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ಇದು ಭಾರತಕ್ಕೆ ಬಾಂಗ್ಲಾ ವಿರುದ್ಧ ಏಷ್ಯಾಕಪ್ನಲ್ಲಿ ಎದುರಾದ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ 2012ರಲ್ಲಿ ಭಾರತ ತಂಡ 5 ವಿಕೆಟ್ಗಳ ಸೋಲು ಕಂಡಿತ್ತು.