ಚೆನ್ನೈ: ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕ ದಿನ ಸರಣಿಯಲ್ಲಿ (INDvsAUS) ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಮೂರನೇ ಪಂದ್ಯಕ್ಕೆ ಅವರಿಗೆ ಅವಕಾಶ ನೀಡದಿರುವುದು ಉತ್ತಮ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅಂತೆಯೇ ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ವಾಸಿಮ್ ಜಾಫರ್ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಫರ್ ಪ್ರಕಾರ ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್ಗೆ ಚಾನ್ಸ್ ಕೊಟ್ಟು ನೋಡಬಹುದು ಎಂದು ಹೇಳಿದ್ದಾರೆ.
ಭಾರತ ತಂಡದ ಮಧ್ಯಮ ಕ್ರಮಾಂಕದಲ ಬ್ಯಾಟರ್ ಶ್ರೇಯಸ್ ಅಯ್ಯರ್ ಟೆಸ್ಟ್ ಸರಣಿಯ ಕೊನೇ ಪಂದ್ಯದ ವೇಳೆ ಗಾಯಗೊಂಡಿದ್ದರು. ಹೀಗಾಗಿ ಸೂರ್ಯಕುಮಾರ್ ಯಾದವ್ಗೆ ಅವಕಾಶ ಲಭಿಸಿತ್ತು. ಆದರೆ ಎರಡೂ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತಿದ್ದಾರೆ. ಹೀಗಾಗಿ ಮೂರನೇ ಪಂದ್ಯಕ್ಕೆ ಅವರನ್ನು ಕೈಬಿಟ್ಟು ಪರ್ಯಾಯ ಆಟಗಾರನನ್ನು ಹುಡುಕಬೇಕು ಎಂಬುದಾಗಿ ಹೇಳಿದ್ದಾರೆ ಹಿರಿಯ ಕ್ರಿಕೆಟಿಗರು. ಅವರೆಲ್ಲರೂ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಿದರೆ ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ : Suryakumar Yadav: ತಿರುಪತಿಗೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ ದಂಪತಿ
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜತೆ ಮಾತನಾಡಿದ ವಾಸಿಮ್ ಜಾಫರ್, ಆಸ್ಟ್ರೇಲಿಯಾ ವಿರುದ್ಧ ಚೆನ್ನೈ ಎಂ ಚಿದಂಬರಂನಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆಯಾಗಲಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಪರಿಗಣಿಸಿದರೆ ತಂಡಕ್ಕೆ ಒಳಿತು ಎಂದಿದ್ದಾರೆ.
“ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಎದುರಿಸಿದ ಮೊದಲ ಎಸೆತ 145 ಕಿ.ಮೀ ವೇಗದಿಂದ ಕೂಡಿತ್ತು. ಹೀಗಾಗಿ ಅದನ್ನು ಎದುರಿಸಲು ಕಷ್ಟವಾಗಿತ್ತು ಎಂದು ನಾವು ಅಂದುಕೊಳ್ಳಬಹುದು. ಯಾಕೆಂದರೆ ಎಡಗೈ ಬೌಲರ್ಗಳನ್ನು ಹಿಮ್ಮೆಟ್ಟಿಸುವುದು ಸುಲಭದ ಕೆಲಸವವೇನೂ ಅಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಅವರಿಗೆ ಬೌಲರ್ನ ಎಸೆತವನ್ನು ನಿರೀಕ್ಷೆ ಮಾಡಬಹುದಾಗಿತ್ತು. ಅವರು ನೇರವಾಗಿ ಸ್ಪಂಪ್ಗೆ ಎಸೆಯುತ್ತಾರೆ ಎಂಬುದನ್ನು ಯೋಚನೆ ಮಾಡಲು ಅವಕಾಶವಿತ್ತು. ಅದಕ್ಕೆ ಪೂರಕವಾಗಿ ಅವರು ಸಿದ್ಧತೆ ನಡೆಸಿಕೊಳ್ಳಬಹುದಾಗಿತ್ತು. ಆದರೆ, ಅವರು ಆ ರೀತಿ ಮಾಡಲಿಲ್ಲ ಎಂಬದಾಗಿ ಜಾಫರ್ ನುಡಿದಿದ್ದಾರೆ.
ಬೆಳಗದ ಸೂರ್ಯ
ಕಳೆದ ವರ್ಷ ಸೂರ್ಯಕುಮಾರ್ ಸಿಕ್ಕಾಪಟ್ಟೆ ಮಿಂಚಿದ್ದರು. ಆ ವರ್ಷ ಬರೇ ಟಿ20 ಪಂದ್ಯಗಳಿದ್ದವು. ಭರ್ಜರಿ ಬ್ಯಾಟಿಂಗ್ ನಡೆಸಿದ್ದ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಿದ್ದರು. ಆದರೆ, ಹಾಲಿ ಆವೃತ್ತಿಯಲ್ಲಿ ಏಕ ದಿನ ಸರಣಿಯಲ್ಲಿ ಸಿಕ್ಕಿರುವ ಅವಕಾಶವನ್ನು ಅವರು ಬಳಸಿಕೊಳ್ಳುತ್ತಿಲ್ಲ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದರು. ಎರಡೆರಡು ಬಾರಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಟೀಕೆಗಳನ್ನು ಎದರಿಸುತ್ತಿದ್ದಾರೆ.
ಇದನ್ನೂ ಓದಿ: Sanju Samson: ತಲೈವಾ ಭೇಟಿಯಾಗಿ ಬಾಲ್ಯದ ಕನಸು ನನಸಾಗಿಸಿದ ಸಂಜು ಸ್ಯಾಮ್ಸನ್
ಭಾರತ ಏಕದಿನ ತಂಡದಲ್ಲಿ ಸಿಕ್ಕ ಸೀಮಿತ ಅವಕಾಶಗಳಲ್ಲಿ ಸಂಜು ಸ್ಯಾಮ್ಸನ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 66ರ ಸರಾಸರಿಯಲ್ಲಿ 330 ರನ್‌ಗಳನ್ನು ಗಳಿಸಿದ್ದಾರೆ. ಹಾಗಾಗಿ ಭಾರತ ಏಕದಿನ ತಂಡದಲ್ಲಿ ಆಡಲು ಸಂಜು ಸ್ಯಾಮ್ಸನ್ ಅರ್ಹರಾಗಿದ್ದಾರೆ ಎಂದು ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈಫಲ್ಯದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರನ್ನು ಮೂರನೇ ಪಂದ್ಯಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಉಳಿಸಿಕೊಳ್ಳಲಿದೆಯೇ ಎಂದು ಕಾದು ನೋಡಬೇಕಾಗುತ್ತದೆ. ಒಂದು ವೇಳೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಿದರೂ ಒಳ್ಳೆಯ ಆಯ್ಕೆ ಎಂದು ಜಾಫರ್ ನುಡಿದಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಮೂರನೇ ಪಂದ್ಯ ಬುಧವಾರ ನಡೆಯಲಿದೆ.