Site icon Vistara News

ಬಾರಿಸಿದ್ದು ಬೌಂಡರಿಗೆ, ಚೆಂಡು ಜಿಗಿದದ್ದು ಸಿಕ್ಸರ್​ಗೆ; ಬೇಸರದಲ್ಲಿ ಮೈದಾನದಲ್ಲೇ ಕುಳಿತ ರಾಹುಲ್​

KL Rahul

ಚೆನ್ನೈ: ಆಸ್ಟ್ರೇಲಿಯಾ(IND vs AUS) ವಿರುದ್ಧದ ಪಂದ್ಯದಲ್ಲಿ ಅತ್ಯಂತ ಜವಾಬ್ದಾರಿಯು ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡಿಗ ಕೆ.ಎಲ್​ ರಾಹುಲ್​(KL Rahul) ಅವರು ತಮ್ಮ ಅಮೋಘ ಇನಿಂಗ್ಸ್​ ಹೊರತಾಗಿಯೂ ಬೇಸರಗೊಂಡ ಘಟನೆ ನಡೆದಿದೆ. ಇದಕ್ಕೆ ಕಾರಣ ಕೈತಪ್ಪಿದ ಶತಕ ಯೋಜನೆ.

ಇಲ್ಲಿನ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಆಸೀಸ್​ ವಿರುದ್ಧದದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್​ಗಳಲ್ಲಿ 199 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ 2 ರನ್​ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದೇ ವೇಳೆ ಕ್ರೀಸ್​ಗೆ ಬಂದ ರಾಹುಲ್​, ಕೊಹ್ಲಿ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್​ ಕಟ್ಟಿ ತಂಡವನ್ನು ಸೋಲಿನಿಂದ ಪಾರು ಪಾಡಿದರು.

ವೆಲ್​ಕಮ್​ ಬೌಂಡರಿ ಮೂಲಕ ಆಟ ಆರಂಭಿಸಿದ ರಾಹುಲ್​ ಅತ್ಯಂತ ಪರಿಪೂರ್ಣ ಹೊಡೆತಗಳ ಮೂಲಕ ಸೊಗಸಾದ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕಾಮೆಂಟ್ರಿ ಮಾಡುತ್ತಿದ್ದವರೂ ಕೂಡ ರಾಹುಲ್​ ಬ್ಯಾಟಿಂಗ್​ ಕಂಡು ಕ್ಲಾಸಿ ಬ್ಯಾಟಿಂಗ್​ ಎಂದು ಬಣ್ಣಿಸಿದರು. ಒಂದೇ ಒಂದು ಹೊಡೆತ ಕೂಡ ಮಿಸ್​ ಎಡ್ಜ್​ ಆಗದ ರೀತಿಯಲ್ಲಿ ಬ್ಯಾಟ್ ಬೀಸಿ ಆಸೀಸ್​ಗೆ ಕಂಟಕವಾದರು. ಆದರೆ ಅವರ ಶತಕದ ಯೋಜನೆ ಮಾತ್ರ ಕೈಗೂಡಲಿಲ್ಲ.

ಇದನ್ನೂ ಓದಿ ವಿಶ್ವಕಪ್​ನಲ್ಲಿಯೂ ಮುಂದುವರಿದ ಜಾರ್ವೊ ಕಾಟ; ಮುಂದಿನ ಪಂದ್ಯಗಳಿಗೆ ನಿಷೇಧ ಹೇರಿದ ಐಸಿಸಿ

ಸಿಕ್ಸರ್​ನಿಂದ ವಿಫಲವಾದ ಶತಕ

ರಾಹುಲ್​ ಅವರು 91 ರನ್​ ಗಳಿಸಿದ್ದರು. ಶತಕಕ್ಕೆ 9 ರನ್​ಗಳ ಅಗತ್ಯವಿತ್ತು. ಆದರೆ ಪಂದ್ಯ ಗೆಲ್ಲಲು 5ರನ್​ ಮಾತ್ರ ಉಳಿದಿತ್ತು. ಈ ವೇಳೆ ಉಪಾಯವೊಂದನ್ನು ಮಾಡಿದ ರಾಹುಲ್​ ಮೊದಲು ಬೌಂಡರಿ ಬಾರಿಸಿ ಆ ಬಳಿಕ ಸಿಕ್ಸರ್​ ಬಾರಿಸಿದರೆ ಪಂದ್ಯದ ಗೆಲುವಿನ ಜತೆಗೆ ತಮ್ಮ ಶತಕವೂ ಪೂರ್ಣಗೊಳ್ಳುತ್ತದೆ ಎಂದು ಭಾವಿಸಿ ಕಮಿನ್ಸ್​ ಎಸೆತವನ್ನು ಬೌಂಡರಿಯ ಕಡೆ ಬಾರಿಸಿದರು. ಆದರೆ ಇದು ನೇರವಾಗಿ ಸಿಕ್ಸರ್​ಗೆ ಬಡಿಯಿತು. ಸಿಕ್ಸರ್​ ದಾಖಲಾಗುತ್ತಿದ್ದಂತೆ ರಾಹುಲ್​ ಒಂದು ಕ್ಷಣ ಆಶ್ಚರ್ಯಚಕಿತರಾಗಿ ಮೈದಾನದಲ್ಲೇ ಕುಳಿತು ಬಿಟ್ಟರು. ಇದು ಹೇಗೆ ಸಿಕ್ಸರ್​ಗೆ ಹೋಯಿತು, ನನ್ನ ಈ ಸಿಕ್ಸರ್​ನಿಂದ ನನ್ನ ಶತಕದ ಯೋಜನೆ ಫಲಿಸಲಿಲ್ಲವಲ್ಲ ಎಂದು ಬೇಸರಗೊಂಡರು. ಪಂದ್ಯದ ಬಳಿಕ ಮಾತನಾಡುವ ವೇಳೆಯೂ ರಾಹುಲ್​ ತನ್ನ ಶತಕ ಯೋಜನೆ ವಿಫಲಗೊಂಡಿತು ಎಂದರು. ರಾಹುಲ್​ 97 ರನ್​ ಬಾರಿಸಿ ಅಜೇಯರಾದರು.

ವಿಲನ್​ ಆದ ಪಾಂಡ್ಯ

ರಾಹುಲ್​ ಅವರ ಶತಕ ಕೈತಪ್ಪಲು ಹಾರ್ದಿಕ್​ ಪಾಂಡ್ಯ ಅವರೇ ಮುಖ್ಯ ಕಾರಣ ಎಂದು ನೆಟ್ಟಿಗರು ಪಾಂಡ್ಯಗೆ ಹಿಡಿ ಶಾಪ ಹಾಕಿದ್ದಾರೆ. ನೀನೊಬ್ಬ ಸ್ವಾರ್ಥಿ, ನೀನು ಎಂದಿಗೂ ಬದಲಾಗುವುದಿಲ್ಲ ಹೀಗೆ ಹಲವು ಕಟು ಮಾತುಗಳಿಂದ ಪಾಂಡ್ಯಗೆ ಬೈದಿದ್ದಾರೆ. ಪಾಂಡ್ಯ ಸಿಕ್ಸರ್​ ಬಾರಿಸದೇ ಇದ್ದರೆ ರಾಹುಲ್​ಗೆ ಆರಾಮವಾಗಿ ಶತಕ ಬಾರಿಸಬಹುದಾಗಿತ್ತು. ಈ ಹಿಂದೆ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿಯೂ ತಿಲಕ್​ ವರ್ಮ ಅವರು 49 ರನ್​ ಗಳಿಸಿದ್ದ ವೇಳೆ ಪಾಂಡ್ಯ ಸಿಕ್ಸರ್​ ಬಾರಿಸಿ ತಿಲಕ್​ ಅವರ ಅರ್ಧಶತಕವನ್ನು ತಪ್ಪಿದ್ದರು. ಆಗ ಕೂಡ ನೆಟ್ಟಿಗರು ಪಾಂಡ್ಯಗೆ ಕ್ಲಾಸ್​ ತೆಗೆದುಕೊಂಡಿದ್ದರು.

Exit mobile version